ಎಳ್ಳೆಣ್ಣೆ ಬಳಕೆಯ ಪ್ರಯೋಜನ ತಿಳಿದುಕೊಳ್ಳಿ!

ಎಳ್ಳೆಣ್ಣೆ ಆರೋಗ್ಯಕರ ಎಣ್ಣೆಯಾಗಿದ್ದು ಸೇವಿಸಲು ಹಾಗೂ ಅಡುಗೆಗೆ ಬಳಸಲು ಸುರಕ್ಷಿತವಾಗಿದೆ. ಎಣ್ಣೆಯನ್ನು ಮಸಾಜ್ ಮಾಡಲೂ ಬಳಸಬಹುದು. ಇದೇ ಕಾರಣಕ್ಕೆ ಆಯುರ್ವೇದದಲ್ಲಿ ಇದನ್ನು ಪ್ರಮುಖವಾಗಿ ಮಸಾಜ್ ಮೂಲಕ ನೋವು ಕಡಿಮೆ ಮಾಡುವ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಇದು ಆಮ್ಲೀಯವೂ ಅಲ್ಲದ, ಕ್ಷಾರೀಯವೂ ಅಲ್ಲದ ಗುಣ ಹೊಂದಿರುವ ಕಾರಣಕ್ಕೇ ಇದಕ್ಕೆ ‘ಎಣ್ಣೆಗಳ ರಾಣಿ’ ಎಂಬ ಬಿರುದನ್ನು ನೀಡಲಾಗಿದೆ. ಎಳ್ಳೆಣ್ಣೆಯ ಕೆಲವು ಪ್ರಯೋಜನಗಳನ್ನು ಇಂದು ವಿವರಿಸಲಾಗಿದೆ, ಬನ್ನಿ ನೋಡೋಣ:
#ಕಡಿಮೆ ಕೊಬ್ಬು ಹೊಂದಿರುವ ಎಣ್ಣೆ:ಬೆಣ್ಣೆ ಮತ್ತು ದೇಸಿ ತುಪ್ಪಕ್ಕಿಂತ ಎಳ್ಳೆಣ್ಣೆ ಕಡಿಮೆ ಕೊಬ್ಬನ್ನು ಹೊಂದಿದ್ದು, ಇತರ ಅಡುಗೆ ಎಣ್ಣೆಗಳು ಮೂರು ವಿಧದ ಕೊಬ್ಬಿನ ಮಿಶ್ರಣವನ್ನು ಹೊಂದಿರುತ್ತವೆ. ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನಡೆಸಿದ ಅಧ್ಯಯನದ ಪ್ರಕಾರ, ಎಲ್ಲಾ ಕೊಬ್ಬುಗಳು ನಮಗೆ ಹಾನಿಯುಂಟು ಮಾಡುವುದಿಲ್ಲ. ವಿಶೇಷವಾಗಿ ಪಾಲಿ ಅನ್ ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ (ಪಿಯುಎಫ್‌ಎ) ಪರಿಧಮನಿಯ ಹೃದಯ ಕಾಯಿಲೆ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
#ತ್ವಚೆಯ ಪ್ರಯೋಜನಗಳು:ಎಳ್ಳಿನ ಬಳಕೆಯಿಂದ ತ್ವಚೆಗೆ ತೇವಕಾರಕ ಫಲಿತಾಂಶ ದೊರಕುತ್ತದೆ. ಈ ಮೂಲಕ ತ್ವಚೆ ನುಣುಪಾಗಿ ಹಾಗೂ ನೆರಿಗೆಗಳಿಲ್ಲದೇ ಇರಲು ನೆರವಾಗುತ್ತದೆ. ತ್ವಚೆಯ ಹಲವಾರು ತೊಂದಗಳಿಗೆ ಎಳ್ಳೆಣ್ಣೆ ಉತ್ತಮ ಪರಿಹಾರವಾಗಿದೆ ಹಾಗೂ ಇದೊಂದು ನೈಸರ್ಗಿಕ ಸೂರ್ಯಕಿರಣ ವಿಕರ್ಷಕವೂ ಆಗಿದೆ. ಎಳ್ಳೆಣ್ಣೆ ಚರ್ಮದ ಸೂಕ್ಷ್ಮರಂಧ್ರಗಳಲ್ಲಿ ಸುಲಭವಾಗಿ ಇಳಿಯುವ ಮೂಲಕ ಕೆಳಪದರಕ್ಕೆ ಶೀಘ್ರವಾಗಿ ತಲುಪುತ್ತದೆ ಹಾಗೂ ಚರ್ಮದ ಆಳದಿಂದ ಪೋಷಣೆ ನೀಡುವ ಮೂಲಕ ತ್ವಚೆಯನ್ನು ಒಣಗುವುದರಿಂದ ಹಾಗೂ ಬಿರುಕುಗಳಿಂದ ರಕ್ಷಿಸುತ್ತದೆ.
#ಎಳ್ಳೆಣ್ಣೆಯು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಡುತ್ತದೆ ಮತ್ತು ಜೀರ್ಣಕ್ರಿಯೆಗೆ ಇದು ಸಹಕಾರಿಯಾಗಿದೆ. ಎಳ್ಳಿನ ಎಣ್ಣೆ ಫೈಬರ್ ಸಮೃದ್ಧವಾಗಿದೆ, ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರೊಂದಿಗೆ ನಿಮಗೆ ಮಲಬದ್ಧತೆಯ ಸಮಸ್ಯೆ ಇರುವುದಿಲ್ಲ.
#ಮೂಳೆಗಳ ಬೆಳವಣಿಗೆ ಹೆಚ್ಚಿಸುತ್ತದೆ:ಎಳ್ಳೆಣ್ಣೆಯಲ್ಲಿರುವ ಕ್ಯಾಲ್ಸಿಯಂ ಮೂಳೆಗಳು ದೃಢಗೊಳ್ಳಲು ಅಗತ್ಯವಾದ ಖನಿಜವಾಗಿದೆ. ಅಲ್ಲದೇ ಜೊತೆಗೆ ತಾಮ್ರ, ಸತು ಮತ್ತು ಮೆಗ್ನೀಶಿಯಂಗಳೂ ಮೂಳೆಗಳ ದೃಢತೆ ಹೆಚ್ಚಿಸಲು ನೆರವಾಗುತ್ತವೆ. ಇದೇ ಕಾರಣಕ್ಕೆ ಆಯುರ್ವೇದ ಮೂಳೆಗಳ ದೃಢತೆಗೆ ಬಲಸಲಾಗುವ ಮಸಾಜ್ ಎಣ್ಣೆಯಾಗಿ ಎಳ್ಳೆಣ್ಣೆಯನ್ನು ಬಳಸುತ್ತದೆ. ಮೂಳೆಗಳ ಮೇಲೆ ಮಾಡಿದ ಎಳ್ಳೆಣ್ಣೆಯ ಮಸಾಜ್ ಮೂಳೆಗಳನ್ನು ಗಟ್ಟಿಗೊಳಿಸುವುದರ ಜೊತೆಗೇ ಬಹಳ ಹಳೆಯ ಮೂಳೆಯ ಶಿಥಿಲತೆಯನ್ನೂ ಸರಿಪಡಿಸಲು ನೆರವಾಗುತ್ತದೆ.
#ಎಳ್ಳಿನ ಎಣ್ಣೆ ನಿಮ್ಮ ದೇಹದಲ್ಲಿ ಶಾಖವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಚಳಿಗಾಲದಲ್ಲಿ ಎಳ್ಳಿನ ಎಣ್ಣೆಯಿಂದ ಮಸಾಜ್ ಮಾಡುವುದು ಉತ್ತಮ. ಇದು ಸ್ನಾಯು ನೋವು, ಕೆಮ್ಮು ಮತ್ತು ಶೀತಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಎಳ್ಳಿನ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ನಿಮ್ಮ ದೇಹಕ್ಕೆ ಬೇಕಾದ ಶಾಖ ಸಿಗುತ್ತದೆ. ದೇಹವೂ ತುಂಬಾ ರಿಲ್ಯಾಕ್ಸ್ ಆಗುತ್ತದೆ ಆದರೆ, ಬೇಸಿಗೆಯಲ್ಲಿ ಎಳ್ಳಿನ ಎಣ್ಣೆಯನ್ನು ಬಳಸಬಾರದು ಎಂದು ಹಿರಿಯರು ಹೇಳುತ್ತಾರೆ.