ಅಜೀರ್ಣ ಸಮಸ್ಯೆಗಳಿಗೆ ಈ ಮನೆಮದ್ದು!

ಜೀವನ ವಿಧಾನದ ಬದಲಾವಣೆಯಿಂದ ಅಕಾಲಿಕವಾದ ಆಹಾರಕ್ರಮ, ಅಹಿತವಾದ ಆಹಾರ ಸೇವನೆ, ಮಲ ಮೂತ್ರ ತಡೆಗಟ್ಟುವಿಕೆ, ನಿಯಮಿತ ಪ್ರಮಾಣದ ಆಹಾರಕ್ಕಿಂತ ಅಧಿಕವಾದ ಆಹಾರವನ್ನು ಸೇವನೆ ಮಾಡುವುದು, ರಾತ್ರಿ ವೇಳೆ ನಿದ್ರೆ ಮಾಡದಿರುವುದು, ಅತ್ಯಂತ ಕಡಿಮೆ ಸಮಯ ನಿದ್ರೆ ಮಾಡುವುದು, ದುಷ್ಚಟಗಳನ್ನು ಹೊಂದುವುದರಿಂದ ಅಜೀರ್ಣದ ಸಮಸ್ಯೆ ಕಂಡುಬರುತ್ತದೆ. ಈ ಸಮಸ್ಯೆಗಳಿಗೆ ಈ ಮನೆಮದ್ದು ಸಹಕಾರಿ ಆಗಬಹುದು
#ಕೊತ್ತಂಬರಿ ಕಾಳುಗಳು ಒಂದು ಹಿಡಿಯಷ್ಟು ಧನಿಯ (ಕೊತ್ತಂಬರಿ) ಕಾಳುಗಳನ್ನು ದಪ್ಪತಳದ ಬಾಣಲೆಯಲ್ಲಿ ಚಿಕ್ಕ ಉರಿಯಲ್ಲಿ ಹುರಿಯಿರಿ. ಸ್ವಲ್ಪ ಕೆಂಪಗಾಗುತ್ತಲೇ ಬಾಣಲೆಯಿಂದ ಒಂದು ತಟ್ಟೆಯಲ್ಲಿ ಹರಡಿ. ಇದನ್ನು ಕೊಂಚ ಜಜ್ಜಿ (ಎರಡು ಬಟ್ಟೆಗಳ ನಡುವೆ ಇರಿಸಿ ಲಟ್ಟಣಿಗೆಯಿಂದ ಲಟ್ಟಿಸಿ) ಒಂದು ಗಾಳಿಯಾಡದ ಬಾಟಲಿಯಲ್ಲಿ ಸಂಗ್ರಹಿಸಿ. ಊಟವಾದ ಬಳಿಕ ಮಜ್ಜಿಗೆಯಲ್ಲಿ ಈ ಪುಡಿಯನ್ನು ಸೇರಿಸಿ (ಒಂದು ಲೋಟಕ್ಕೆ ಒಂದು ಚಿಕ್ಕ ಚಮಚ) ಕುಡಿದರೆ ಹೊಟ್ಟೆಯುರಿ, ಉಬ್ಬರ ಕಡಿಮೆಯಾಗುತ್ತದೆ. ಹೊಟ್ಟೆಯುಬ್ಬರ ಮತ್ತು ಉರಿ ಜಾಸ್ತಿ ಇದ್ದರೆ ಕೆಲವು ಏಲಕ್ಕಿ, ಲವಂಗ ಮತ್ತು ಹಸಿಶುಂಠಿಯ ಚಿಕ್ಕ ತುಂಡುಗಳನ್ನು ಸೇರಿಸಿ ನಯವಾಗಿ ಅರೆದು ಮಜ್ಜಿಗೆಗೆ ಸೇರಿಸಿ ಕುಡಿಯಿರಿ.
#ತಿನ್ನುವಂತಹ ಆಹಾರ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತಿದೆ ಎನ್ನುವವರು, ಆಹಾರ ತಿಂದ ಕೂಡಲೇ ಬಿಸಿ ನೀರನ್ನು ಕುಡಿಯಬೇಕು. ಪ್ರತಿದಿನ ಬೆಳಿಗ್ಗೆ ಅಥವಾ ಊಟಕ್ಕೆ ಅರ್ಧಗಂಟೆ ಮೊದಲು ಬಿಸಿ ನೀರನ್ನು ಕುಡಿಯುವುದರಿಂದ ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ. ಇದರಿಂದ ಹೊಟ್ಟೆಯಲ್ಲಿರುವ ಗ್ಯಾಸ್ ರಸ ಉತ್ಪತ್ತಿಯಾಗುವುದು ನಿಯಂತ್ರಣಗೊಳ್ಳುತ್ತದೆ.
#ಒಂದು ಕಪ್ ಬಿಸಿ ನೀರಿಗೆ ಎರಡು ಹನಿ ಪುದೀನಾ ಎಣ್ಣೆ ಹಾಕಿ ಮತ್ತು ತಕ್ಷಣವೇ ಕುಡಿಯಿರಿ. ಇದರಿಂದ ವಾಯು ಮತ್ತು ತೇಗಿನ ಸಮಸ್ಯೆಯು ಕಡಿಮೆ ಆಗುವುದು.
#ಇದನ್ನ ರಾತ್ರಿ ಮಲಗುವಾಗ ಸೇವಿಸಬೇಕು. ಒಂದು ಪ್ಯಾನ್ ಗೆ ಎರಡು ಚಮಚ ಜೀರಿಗೆ, ಎರಡು ಚಮಚ ಅಜವಾನ (ಓಂ ಕಾಳು) , ಒಂದು ಚಮಚ ಕೊತ್ತಂಬರಿ ಬೀಜ, ೧೦ ಪುದೀನಾ ಎಲೆಗಳು, ಒಂದು ಚಮಚ ಸೋಂಪು ಕಾಳು ಸೇರಿಸಿ ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ನಂತರ ಸ್ವಲ್ಪ ತಣ್ಣಗಾಗಲು ಬಿಟ್ಟು ಎಲ್ಲಾ ಪದಾರ್ಥಗಳನ್ನು ಪುಡಿ ಮಾಡಿಕೊಳ್ಳಬೇಕು. ಈ ಪುಡಿಗೆ ಒಂದು ಚಮಚ ಅರಿಶಿಣ, ಒಂದು ಚಮಚ ಕಲ್ಲು ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಂಡು ಈ ಮಿಶ್ರಣವನ್ನು ರಾತ್ರಿ ಊಟ ಆದ ನಂತರ, ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ತಯಾರಿಸಿಕೊಂಡ ಇ ಪುಡಿಯನ್ನು ಹಾಕಿ, ಹದಿನೈದು ನಿಮಿಷ ಬಿಟ್ಟು ಸೇವಿಸುವುದರಿಂದ ಜೀರ್ಣ ಕ್ರಿಯೆ ಉತ್ತಮಗೊಳ್ಳುತ್ತದೆ.
#ಭಾರತೀಯರು ಸಾಮಾನ್ಯವಾಗಿ ಜೀರಿಗೆಯನ್ನು ಹೆಚ್ಚು ಬಳಕೆ ಮಾಡುತ್ತಾರೆ. ಜೀರ್ಣಕ್ರಿಯೆ ಸಮಸ್ಯೆಗಳಿಂದ ಸ್ವಲ್ಪ ಪರಿಹಾರವನ್ನು ಈ ಜೀರಿಗೆ ನೀಡುತ್ತದೆ. ಉದಾಹರಣೆಗೆ ಗ್ಯಾಸ್ ಸಮಸ್ಯೆಗೆ ಜೀರಿಗೆ ಉತ್ತಮ ಮದ್ದು ಎಂದು ಹೇಳಲಾಗುತ್ತದೆ. ಜೀರಿಗೆ ಬೀಜಗಳಲ್ಲಿ ಉರಿಯೂತ ನಿವಾರಕ ಗುಣ ಇದ್ದು ಅದು ಹೊಟ್ಟೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಜೀರಿಗೆ ನೀರು ಸಾಮಾನ್ಯವಾಗಿ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ, ಹೀಗಾಗಿ ನೀವು ಕರುಳಿನ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
#ಒಂದು ಲೋಟ ಬಿಸಿ ನೀರಿಗೆ 5 ಗ್ರಾಂನಷ್ಟು ಇಂಗು ಹಾಕಿ. ಇದಕ್ಕೆ ಒಂದು ಚಮಚ ಸಕ್ಕರೆ ಹಾಕಿಕೊಂಡರೆ ರುಚಿಯು ಚೆನ್ನಾಗಿರುವುದು. ಇದರ ಘಾಟು ವಾಸನೆ ಕುಡಿಯುವ ವೇಳೆ ತೊಂದರೆ ನೀಡಬಹುದು. ಆದರೆ ಇದು ವಾಯು ಮತ್ತು ಅಜೀರ್ಣ ಸಮಸ್ಯೆ ದೂರ ಮಾಡುವುದು.