ಆರೋಗ್ಯಕರ ಹೃದಯವನ್ನು ಹೊಂದಲು ಕಾಳಜಿ ವಹಿಸಬೇಕಾದ ವಿಷಯಗಳು!

ನಿಮ್ಮ ಹೃದಯವು ಹೆಚ್ಚು ಕಾಲ ಚೆನ್ನಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಲು ನೀವು ಏನೇನು ಮಾಡಬಹುದು?
ಡಯಾಬಿಟಿಸ್: ಡಯಾಬಿಟಿಸನ್ನು ಕಾಯಿಲೆಗಳ ಪೆಟ್ಟಿಗೆ ಎನ್ನಲಾಗುತ್ತದೆ. ಏಕೆಂದರೆ, ಒಮ್ಮೆ ನಿಮ್ಮಲ್ಲಿ ಡಯಾಬಿಟಿಸ್ ಕಾಣಿಸಿಕೊಂಡರೆ, ಅದು ಮತ್ತಷ್ಟು ಕಾಯಿಲೆಗಳಿಗೆ ಬಾಗಿಲನ್ನು ತೆರೆಯುತ್ತಾ ಹೋಗುತ್ತದೆ. ಡಯಾಬಿಟಿಸ್‌ನಿಂದ ಬಳಲುತ್ತಿರುವ ಜನರು ಸಾಮಾನ್ಯವಾಗಿ ಹೆಚ್ಚಿನ ಮಟ್ಟದ ಲಿಪಿಡ್ ಮತ್ತು ಕೊಲೆಸ್ಟರಾಲ್ ಹೊಂದಿರುತ್ತಾರೆ. ಇದರಿಂದ ರಕ್ತನಾಳಗಳಲ್ಲಿ ಕೊಲೆಸ್ಟರಾಲ್ ಶೇಖರಣೆಯಾಗುತ್ತದೆ. ಪರಿಣಾಮವಾಗಿ, ರಕ್ತವನ್ನು ಪಂಪ್ ಮಾಡಲು ಹೃದಯಕ್ಕೆ ಕಷ್ಟವಾಗುತ್ತದೆ.[2] ಹೃದಯವು ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳಲು ಶುರುಮಾಡುತ್ತದೆ. ಡಯಾಬಿಟಿಸ್‌ಗೆ ಗುರಿಯಾದ ಜನರು ಹೃದಯ ವೈಫಲ್ಯಕ್ಕೆ ಒಳಗಾಗುವ ಸಾಧ್ಯತೆ ಎರಡು ಪಟ್ಟು ಹೆಚ್ಚಿರುತ್ತದೆ ಎಂದು 2019 ರ ಜನವರಿಯಲ್ಲಿ ಪ್ರಕಟಣೆಯಾದ ಸುದ್ದಿಯೊಂದು ಹೇಳುತ್ತದೆ.
ಇದನ್ನು ತಡೆಯುವುದು ಹೇಗೆ” ಎಂದು ನೀವು ಕೇಳಬಹುದು, ನೀವು ಡಯಾಬಿಟಿಸ್‌ಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ನಿಮಗನಿಸಿದರೆ, ವೈದ್ಯಕೀಯ ವೃತ್ತಿಪರರ ನೆರವನ್ನು ಪಡೆಯುವ ಮೂಲಕ ಡಯಾಬಿಟಿಸ್‌ಗೆ ಕಡಿವಾಣ ಹಾಕಲು ಅವಕಾಶ ಇದೆ.[4] ಆ ಮೂಲಕ ಕಾಯಿಲೆಗಳ ಪೆಟ್ಟಿಗೆಯ ಬಾಗಿಲು ತೆರೆದುಕೊಳ್ಳದಂತೆ ನೋಡಿಕೊಳ್ಳಬಹುದು.
#ಬೊಜ್ಜು: ನಿಮ್ಮ ಹೃದಯದ ಮೇಲೆ ಹೆಚ್ಚುವರಿ ತೂಕವು ನೇರವಾಗಿ ಇಲ್ಲವೇ ಪರೋಕ್ಷವಾಗಿ ಇನ್ನಷ್ಟು ಹೊರೆ ಹೊರಿಸುತ್ತದೆ. 2018 ರ ನವೆಂಬರ್‌ನಲ್ಲಿ ಪ್ರಕಟವಾದ ವಿಮರ್ಶೆಯೊಂದರ ಪ್ರಕಾರ, ಸರಾಸರಿ ತೂಕಕ್ಕಿಂತಲೂ ಹೆಚ್ಚು ತೂಕವನ್ನು ಹೊಂದಿರುವವರು, ಆರೋಗ್ಯಕರ ತೂಕವನ್ನು ಹೊಂದಿರುವವರಿಗಿಂತ 10 ವರ್ಷ ಮುಂಚಿತವಾಗಿಯೇ ಹೃದಯ ವೈಫಲ್ಯದ ಚಿಹ್ನೆಗಳನ್ನು ತೋರುತ್ತಾರೆ! ಬಿಎಂಐ ಅಲ್ಲಿ ಪ್ರತಿ ಚದರ ಮೀಟರ್‌ಗೆ ಹೆಚ್ಚುವರಿಯಾಗಿ ಕಾಣಿಸಿಕೊಳ್ಳುವ 1 ಕೆಜಿ ತೂಕವು(1 kg/m2), ಹೃದಯ ವೈಫಲ್ಯದ ಸಾಧ್ಯತೆಯನ್ನು 5% ರಷ್ಟು ಹೆಚ್ಚಿಸುತ್ತದೆ![5] ಹೆಚ್ಚುವರಿ ತೂಕವನ್ನು ಇಳಿಸಿಕೊಳ್ಳಲು ಇದು ಮತ್ತೊಂದು ಪ್ರಮುಖ ಕಾರಣವಾಗಿದೆ.
#ಸಿಕ್ಕಾಪಟ್ಟೆ ಉಪ್ಪು ತಿನ್ನುವುದು: ಒಂದು ಬಟ್ಟಲು ಪೂರ್ತಿ ಗರಿಗರಿಯಾದ ಆಲೂಗಡ್ಡೆ ಚಿಪ್ಸ್ ಕೊಟ್ಟರೆ ಯಾರಿಗೆ ಬೇಡ ಹೇಳಿ. ಅದ್ಯಾವ ಮಾಯೆಯಲ್ಲಿ ಖಾಲಿ ಮಾಡಿ ಮುಗಿಸುತ್ತೇವೆಯೋ ತಿಳಿಯುವುದಿಲ್ಲ! ಆದರೆ, ಆ ಚಿಪ್ಸ್‌ನಲ್ಲಿರುವ ಉಪ್ಪಿನ ಪ್ರಮಾಣ ಖಂಡಿತ ಅಪಾಯವನ್ನು ತಂದಿಡುತ್ತದೆ.
ಉಪ್ಪಿನಲ್ಲಿ ಸೋಡಿಯಂ ಇರುತ್ತದೆ. ಹೆಚ್ಚು ಸೋಡಿಯಂ ಎಂದರೆ ದೇಹದಲ್ಲಿ ಹೆಚ್ಚಿನ ನೀರು. ಇದು ನಿಮ್ಮ ಹೃದಯ ಮತ್ತು ಶ್ವಾಸಕೋಶವನ್ನು ಅಪಾಯಕ್ಕೆ ಗುರಿ ಮಾಡುತ್ತದೆ. ಜೊತೆಗೆ ನಿಮ್ಮ ಕಾಲುಗಳು ಕೂಡ ಊದಿಕೊಳ್ಳಲು ಕಾರಣವಾಗುತ್ತದೆ.
#ಧೂಮಪಾನ: “ಧೂಮಪಾನ ಸಾವನ್ನು ತರುತ್ತದೆ” ಮಾರುಕಟ್ಟೆಯಲ್ಲಿ ಸಿಗುವ ಪ್ರತಿಯೊಂದು ಸಿಗರೇಟ್ ಪ್ಯಾಕ್‌ಗಳ ಮೇಲೆ ಮತ್ತು ಪ್ರತಿಯೊಂದು ಜಾಹೀರಾತಿನಲ್ಲಿ ಈ ಸಂದೇಶವನ್ನು ನಾವು ಓದಿರುತ್ತೇವೆ. ಧೂಮಪಾನ ಕೇವಲ ನಿಮ್ಮ ಶ್ವಾಸಕೋಶವನ್ನು ಮಾತ್ರ ಬಲಿ ಪಡೆಯುವುದಿಲ್ಲ, ಜೊತೆಗೆ ನಿಮ್ಮ ಹೃದಯದ ಸಾಮರ್ಥ್ಯದ ಮೇಲೆ ಕೂಡ ಹೆಚ್ಚಿನ ಪರಿಣಾಮ ಬೀರುತ್ತದೆ.[1] ಮುಂದಾಗಬಹುದಾದ ಹೃದಯ ವೈಫಲ್ಯವನ್ನು ತಪ್ಪಿಸಲು ಇಂದೇ ಧೂಮಪಾನವನ್ನು ನಿಲ್ಲಿಸಿ.