ಶ್ರೀಗಂಧ ಮಾರಾಟಕ್ಕೆ ರೈತರಿಗೆ ಅನುವು ನೀಡುವ ‘ಶ್ರೀಗಂಧ ನೀತಿ 2022’

ಶ್ರೀಗಂಧ ನೀತಿಯ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟದ ಅಂಗೀಕಾರ ಸಿಕ್ಕಿದೆ. ರೈತರು ತಮ್ಮ ಜಮೀನಿನಲ್ಲಿ ಶ್ರೀಗಂಧ ಬೆಳೆಯಬಹುದು. ಶ್ರೀಗಂಧವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶ್ರೀಗಂಧಕ್ಕೆ ಬಹಳ ಬೇಡಿಕೆ ಇದೆ. ಶ್ರೀಗಂಧ ಕಳ್ಳಸಾಗಣೆ ತಡೆಯಲು ಟೆಕ್ನಾಲಜಿಯನ್ನು ಬಳಸುವ ಪ್ರಸ್ತಾವನೆ ಇದೆ. ಶ್ರೀಗಂಧ ಬೆಳೆಯಲು ಪ್ರೋತ್ಸಾಹಧನವನ್ನೂ ಒದಗಿಸಲಾಗುವುದು. ಶ್ರೀಗಂಧ ಮಾರಾಟಕ್ಕೆ ಇನ್ನು ಮುಕ್ತಅವಕಾಶ. ಇದುವರೆಗೂ ಇದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ.
ರೈತರ ಖಾಸಗಿ ಜಮೀನಿನಲ್ಲಿ ಶ್ರೀಗಂಧ ಬೆಳೆ:ರೈತರು ಖಾಸಗಿ ಜಮೀನಿನಲ್ಲಿ ಶ್ರೀಗಂಧವನ್ನು ಬೆಳೆಸಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ನೀಡುವ “ಕರ್ನಾಟಕ ರಾಜ್ಯ ಶ್ರೀಗಂಧ ನೀತಿ 2022′ ಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಗುರುವಾರ ಕರ್ನಾಟಕ ರಾಜ್ಯ ಶ್ರೀಗಂಧ ನೀತಿ 2022ಕ್ಕೆ ಅನುಮೋದನೆ ನೀಡಿದ್ದು, ಸರ್ಕಾರವು ಶೀಘ್ರದಲ್ಲೇ ಜಾರಿಗೆ ತರಲು ಉದ್ದೇಶಿಸಿದೆ.ಈ ನೀತಿಯು ಶ್ರೀಗಂಧ ಬೆಳೆಯಲು ಇರುವ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕುತ್ತದೆ. ಜೊತೆಗೆ ಜನರು ಖಾಸಗಿ ಭೂಮಿಯಲ್ಲಿ ಶ್ರೀಗಂಧವನ್ನು ಬೆಳೆಯಲು ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ.
ಶ್ರೀಗಂಧ ಬೆಳೆಯಲು ರೈತರು ಅನುಸರಿಸಬೇಕಾದ ಕ್ರಮ!
ಪ್ರಸ್ತುತ ಶ್ರೀಗಂಧವನ್ನು ಬೆಳೆಯಲು ರೈತರು ವ್ಯಾಪ್ತಿಯ ಅರಣ್ಯ ಕಚೇರಿಗಳಲ್ಲಿ ನೋಂದಾಯಿಸಿಕೊಳ್ಳಬೇಕು. ರೈತರು ತಾವು ನೆಡಲು ಉದ್ದೇಶಿಸಿರುವ ಸಸಿಗಳ ಸಂಖ್ಯೆಯ ವಿವರಗಳನ್ನು ನೀಡಬೇಕು.ಮರಗಳನ್ನು ಕಡಿಯಲು ಇಲಾಖೆಯಿಂದ ಅನುಮತಿ ಪಡೆಯಬೇಕು. ಅರಣ್ಯ ಇಲಾಖೆ ನಡೆಸುವ ಡಿಪೋಗಳಲ್ಲಿ ಮಾತ್ರ ಶ್ರೀಗಂಧದ ಮರದ ದಿಮ್ಮಿಗಳನ್ನು ಮಾರಾಟ ಮಾಡಲು ರೈತರಿಗೆ ಅವಕಾಶವಿದೆ.ಶ್ರೀಗಂಧಕ್ಕೆ ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ.