ಅಂಚೆ ಇಲಾಖೆಯಿಂದ ಕೇವಲ 399 ರೂ.ಗೆ ಅಪಘಾತ ವಿಮೆ! ಮಾಡಿಸುವುದು ಹೇಗೆ?

ಬೆಂಗಳೂರು, ಅಕ್ಟೋಬರ್ 14: ಜನಸಾಮಾನ್ಯರಿಗೆ ನೆರವಾಗಲೆಂದು ಭಾರತೀಯ ಅಂಚೆ ಇಲಾಖೆಯು ಅತ್ಯಂತ ಕಡಿಮೆ ಹಣದಲ್ಲಿ ಭಾರಿ ಮೊತ್ತದ ಅಪಘಾತ ವಿಮೆಯನ್ನು ಪರಿಚಯಿಸಿದೆ.ಆಕಸ್ಮಿಕ ಅವಘಡಗಳಿಗೆ ತುತ್ತಾದಾಗ ಅಂಚೆ ಕಚೇರಿಯ ಈ ಅಲ್ಪ ಮೊತ್ತದ ಅಪಘಾತ ವಿಮೆ ಆರ್ಥಿಕವಾಗಿ ಸಹಾಯಕ್ಕೆ ಬರಲಿದೆ. ಕನಿಷ್ಠ 18 ರಿಂದ ಗರಿಷ್ಠ 65 ವರ್ಷದ ಒಳಗಿನವರು ಅಂಚೆ ಕಚೇರಿಯಲ್ಲಿ ಖಾತೆ ತೆರೆದು ಈ ವಿಮೆಯ ಅನುಕೂಲ ಪಡೆಯಬಹುದಾಗಿದೆ.
10ಲಕ್ಷ ಅಪಘಾತ ವಿಮೆ ಮಾಡಿಸುವುದು ಹೇಗೆ?ಈಗಾಗಲೇ ನೀವು ಅಂಚೆ ಇಲಾಖೆಯಲ್ಲಿ ‘ಇಂಡಿಯಾ ಪೋಸ್ಟ್ ಪೇಮೆಂಟ್ ಅಕೌಂಟ್’ ಖಾತೆ ಹೊಂದಿದ್ದರೆ ನೀವು ಈ ಅಪಘಾತ ವಿಮೆ ಮಾಡಿಸಲು ಅರ್ಹರಾಗುತ್ತೀರಿ. ಒಂದು ವೇಳೆ ಈ ಖಾತೆ ಹೊಂದಿರದಿದ್ದರೆ ಕೂಡಲೇ 100ರೂ. ಕಟ್ಟಿ ಹತ್ತಿರದ ಅಂಚೆ ಕಚೇರಿಯಲ್ಲಿ ಒಂದೇ ದಿನದಲ್ಲಿ ‘ಇಂಡಿಯಾ ಪೋಸ್ಟ್ ಪೇಮೆಂಟ್ ಅಕೌಂಟ್’ ಖಾತೆ ತೆರೆಯಬಹುದು.ಹೊಸದಾಗಿ ‘ಇಂಡಿಯಾ ಪೋಸ್ಟ್ ಪೇಮೆಂಟ್ ಅಕೌಂಟ್’ ಖಾತೆ ತೆರೆಯುವವರು ಆಧಾರ ಮತ್ತು ಪ್ಯಾನ್ ಸಂಖ್ಯೆ ಸೇರಿದಂತೆ ಅಗತ್ಯ ದಾಖಲಾತಿ ಸಲ್ಲಿಕೆ ಕಡ್ಡಾಯವಾಗಿರುತ್ತದೆ. ನಂತರ ಖಾತೆಯಲ್ಲಿ ಕನಿಷ್ಠ 500 ರೂ.ಹಣ (ಡೆಪಾಸಿಟ್) ಇಡಬೇಕಿದೆ. ಬಳಿಕ ಅದೇ ಖಾತೆ ಮೂಲಕ ನೀವು 399 ರೂ. ಹಣ ಕಟ್ಟಿ 10ಲಕ್ಷ ರೂಪಾಯಿಯ ಅಪಘಾತ ವಿಮೆ ಮಾಡಿಸಬಹುದು. ಈ ಯೋಜನೆಯನ್ನು ಪ್ರತಿ ವರ್ಷ 399 ರೂ. ಪಾವತಿಸುವ ಮೂಲಕ ನವೀಕರಿಸಬೇಕು.
ವಿಮಾ ಯೋಜನೆ ಫಲಾನುಭವಿಯು ಆಕಸ್ಮಿಕ ಸಾವನ್ನಪ್ಪಿದರೆ ಅವರು ಕುಟುಂಬಸ್ಥರಿಗೆ ಹತ್ತು ಲಕ್ಷ ರೂ. ನೀಡಲಾಗುತ್ತದೆ. ಅಂದರೆ ಬಸ್, ಕಾರು ಇನ್ನಿತರ ಅಪಘಾತಗಳು, ಹಾವು ಕಡಿತ, ವಿದ್ಯುತ್ ಆಘಾತ, ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಸಾವು ಸೇರಿದಂತೆ ವಿವಿಧ ಆಕಸ್ಮಿಕವಾಗಿ ಸಾವು ಸಂಭವಿಸಿದರೆ ಪರಿಹಾರ ಪಡೆಯಬಹುದು, ಇದರ ಪೂರ್ತಿ ಮಾಹಿತಿ ಈ ಕೆಳಗಿನಂತಿದೆ.
#ಅಪಘಾತದಿಂದ ಮರಣ ಹೊಂದಿದಲ್ಲಿ 10ಲಕ್ಷ ರೂ. ಆರ್ಥಿಕ ಸಹಾಯ.ಶಾಶ್ವತವಾಗಿ ಅಂಗವೈಕಲ್ಯವಾದರೆ 10ಲಕ್ಷ ರೂ. ಆರ್ಥಿಕ ಸಹಾಯ.
#ಆಸ್ಪತ್ರೆ ವೆಚ್ಚಕ್ಕಾಗಿ 60,000 ರೂ. ಹಣಕ್ಕೆ ಅರ್ಹ.
#ಮೃತರ ಮಕ್ಕಳ ಶಿಕ್ಷಣಕ್ಕಾಗಿ ಪ್ರತಿ ಮಗುವಿಗೆ ರೂ.1 ಲಕ್ಷ ವರೆಗೆ ಸಹಾಯ ಸಂಪೂರ್ಣ ಶಿಕ್ಷಣಕ್ಕೆ ಗರಿಷ್ಠ 2ಲಕ್ಷ ರೂ
#1 ಓಪಿಡಿ ವೆಚ್ಚಕ್ಕೆಂದು 30,000 ಸಾವಿರ ರೂ.ಹಣ ಅಪಘಾತದಲ್ಲಿ ಪಾರ್ಶ್ವವಾಯು ಉಂಟಾದರೆ 10ಲಕ್ಷ ರೂ. ನೀಡಿಕೆ.
#ಕುಟುಂಬದ ಆಸ್ಪತ್ರೆ ಪ್ರಯಾಣ ವೆಚ್ಚಕ್ಕೆ 25,000 ರೂ. ಸಹಾಯ.
#ಆಸಕ್ತರು ಇಂಡಿಯಾ ಪೋಸ್ಟ್ ಪೇಮೆಂಟ್ ಅಕೌಂಟ್ ಖಾತೆ ತೆರೆಯಲು, ಈ ವಿಮಾ ಯೋಜನೆಯ ಲಾಭ ಪಡೆದುಕೊಳ್ಳಲು ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಬಹುದು.