ಅತಿಯಾದ ಅಡಿಕೆ ಸೇವನೆಯು ಆರೋಗ್ಯಕ್ಕೆ ಒಳ್ಳೆಯದಲ್ಲ!

ಎಲೆ ಅಡಿಕೆ ಸುಣ್ಣ ಬೆರೆಸಿ ತಿನ್ನುವ ಮೂಲಕ ತಾತ್ಕಾಲಿಕವಾಗಿ ಕೊಂಚ ಉಲ್ಲಾಸದ ಅನುಭವ ಪಡೆಯಬಹುದೇ ಹೊರತು ಇದರ ಇತರ ಪರಿಣಾಮಗಳು ಮಾತ್ರ ಘೋರವಾಗಿರುತ್ತವೆ. ಇಂದಿನ ದಿನಗಳಲ್ಲಿ ಹಲವು ಕ್ಯಾನ್ಸರ್ ರೋಗಿಗಳನ್ನು ತಪಾಸಿಸಿದ ವೈದ್ಯರಿಗೆ ಈ ರೋಗಕ್ಕೆ ಅವರ ಎಲೆ ಅಡಿಕೆ ತಿನ್ನುವ ಅಭ್ಯಾಸವೇ ಕಾರಣ ಎಂದು ಕಂಡುಬಂದಿದೆ.

ವಿಶೇಷವಾಗಿ ಅಡಿಕೆಯನ್ನು ತಿನ್ನುವ ರೋಗಿಗಳಲ್ಲಿ ಕ್ಯಾನ್ಸರ್, ನಪುಂಸಕತೆ, ದವಡೆಗಳಲ್ಲಿ ನೋವು, ದವಡೆಗಳಲ್ಲಿ ಸೋಂಕು, ಹಲ್ಲು ಹುಳುಕಾಗುವುದು, ಸವೆಯುವುದು, ಗುಳಿಬೀಳುವುದು, ಹಲ್ಲು ಒಳಗಿನಿಂದ ಟೊಳ್ಳಾಗುವುದು ಇತ್ಯಾದಿ ತೊಂದರೆಗಳು ಕಂಡುಬಂದಿವೆ. ಇದೊಂದು ಚಟವಾಗಿ ಪರಿಣಮಿಸಿರುವವರಲ್ಲಿ ಹಲ್ಲು ಒಸಡುಗಳ ಸಹಿತ ನಾಲಿಗೆ, ಒಣಗೆನ್ನೆ, ತುಟಿ, ನಾಲಿಗೆಯ ಮೇಲ್ಭಾಗ, ಗಂಟಲ ಭಾಗ, ಕಿರುನಾಲಿಗೆ ಮೊದಲಾದ ಕಡೆಗಳಲ್ಲಿಯೂ ಕ್ಯಾನ್ಸರ್ ಆವರಿಸುವ ಸಾಧ್ಯತೆ ಹೆಚ್ಚಿರುವುದನ್ನು ಕಂಡುಕೊಳ್ಳಲಾಗಿದೆ.ಅಡಿಕೆಯನ್ನು ಇಂದು ಹಲವಾರು ರೂಪಗಳಲ್ಲಿ ಸೇವಿಸಲಾಗುತ್ತದೆ. ಸಾಂಪ್ರಾದಾಯಿಕ ಎಲೆ ಅಡಿಕೆಯಿಂದ ಹಿಡಿದು ಕ್ಯಾನ್ಸರ್‌ಗೆ ನೇರವಾಗಿ ಕಾರಣವಾಗುವ ಗುಟ್ಕಾದವರೆಗೆ ಅಡಿಕೆ ಹಲವು ರೂಪದಲ್ಲಿ ಆರೋಗ್ಯವನ್ನು ಕೆಡಿಸುತ್ತಿದೆ. ಮಲೆನಾಡಿನ, ಹಾಗೂ ಕರಾವಳಿಯ ಅಡಿಕೆ ಬೆಳೆಗಾರರಿಗೆ ಇದು ಲಾಭವನ್ನೇ ತಂದು ಕೊಡುತ್ತಿರಬಹುದು. ಆದರೆ ಇದನ್ನು ಸೇವಿಸುವವರ ಆರೋಗ್ಯ ಹೇಗೆ ಬಾಧೆಗೊಳಗಾಗುತ್ತದೆ ಎಂಬುದನ್ನು ನೋಡೋಣ…

#ಕೆಲವರು ಅಡಿಕೆ ಮತ್ತು ತಂಬಾಕನ್ನು ಬೆರೆಸಿ ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಇದರಿಂದ ಊರಿಗೆ ಬಂದ ಮಾರಿಯನ್ನು ಮನೆಗೆ ಆಹ್ವಾನಿಸಿದಂತಾಗುತ್ತದೆ. ಏಕೆಂದರೆ ತಂಬಾಕು ಮೊದಲೇ ಕ್ಯಾನ್ಸರ್ ಕಾರಕವಾಗಿದ್ದು ಇದರೊಂದಿಗೆ ಅಡಿಕೆಯನ್ನೂ ಸೇವಿಸಿದರೆ ಕ್ಯಾನ್ಸರ್ ಆವರಿಸುವ ಸಾಧ್ಯತೆ ಸಾವಿರ ಪಟ್ಟು ಹೆಚ್ಚುತ್ತದೆ!

#ಅಡಿಕೆ ಮೆಲ್ಲುವ ಅಭ್ಯಾಸವಿದ್ದವರ ಹಲ್ಲುಗಳು ಕಪ್ಪಗಾಗಿ ನೋಡಲು ಅಸಹ್ಯವಾಗಿರುತ್ತವೆ. ಇವು ವ್ಯಕ್ತಿಯ ಸೌಂದರ್ಯವನ್ನೇ ಕುಂದಿಸುತ್ತವೆ.

#ಅಡಿಕೆಯ ಸೇವನೆ, ಅದರಲ್ಲೂ ಹೆಚ್ಚು ಹೊತ್ತು ಬಾಯಿಯಲ್ಲಿ ಇಟ್ಟುಕೊಳ್ಳುವ ಅಭ್ಯಾಸವುಳ್ಳವರಲ್ಲಿ ಬಾಯಿಯ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಇದು ಶ್ವಾಸಕೋಶ, ಯಕೃತ್, ಗಂಟಲು, ಪ್ರಾಸ್ಟೇಟ್ ಗ್ರಂಥಿ, ಹೊಟ್ಟೆ ಮತ್ತು ಕರುಳಿನ ಕ್ಯಾನ್ಸರ್‌ಗೂ ಕಾರಣವಾಗಬಹುದು.

#ಎಲೆಯಡಿಕೆ ಹಾಕುವ ಮೂಲಕ ತಾತ್ಕಾಲಿಕ ಉಲ್ಲಾಸ ದೊರೆತರೂ ಇದರ ಅಭ್ಯಾಸ ಮೆದುಳಿನ ಮತ್ತು ನರವ್ಯವಸ್ಥೆಯ ಕ್ಷಮತೆಯನ್ನು ಕ್ಷೀಣಿಸುತ್ತದೆ. ವಾಕರಿಕೆ, ವಾಂತಿ, ಅತಿಯಾಗಿ ಜೊಲ್ಲು ಉತ್ಪತ್ತಿಯಾಗುವುದು, ಅತಿಯಾಗಿ ಬೆವರುವುದು ಇತ್ಯಾದಿ ತೊಂದರೆಗಳು ಎದುರಾಗುತ್ತವೆ.

#ಗರ್ಭಿಣಿಯರು ಅಡಿಕೆಯಿಂದ ದೂರವಿದ್ದಷ್ಟೂ ಒಳ್ಳೆಯದು. ಏಕೆಂದರೆ ಇದರ ರಸ ಹುಟ್ಟುವ ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group