ಬೊಜ್ಜು ಕರಗಿಸುವ ಈ ಆಸನಗಳು!

ಹೊಟ್ಟೆಯಲ್ಲಿ ಬೊಜ್ಜು ಬೆಳೆದು ನಿಮಗೆ ಸರಿಯಾಗಿ ದೈಹಿಕ ಕಾರ್ಯಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲವೆಂದಾದರೆ ಆಗ ನೀವು ಯೋಗಾಸನಗಳನ್ನು ಮಾಡಿ ಬೊಜ್ಜು ಕರಗಿಸಬಹುದು. ಈ ಕೆಲವೊಂದು ಯೋಗಾಸನಗಳು ದೇಹವನ್ನು ಫಿಟ್ ಆಗಿಡಲು ತುಂಬಾ ಸಹಕಾರಿ ಆಗಿರುವುದು.
ನಿತ್ಯವೂ ತುಂಬಾ ಬದ್ಧತೆಯಿಂದ ಇದನ್ನು ಮಾಡಿದರೆ ಆಗ ಹೊಟ್ಟೆಯ ಬೊಜ್ಜನ್ನು ಕರಗಿಸಬಹುದು. ಸ್ವಲ್ಪ ತಾಳ್ಮೆ ವಹಿಸಿಕೊಂಡು ನಿಧಾನವಾಗಿ ಒಂದೊಂದಾಗಿಯೇ ಕೆಲವೊಂದು ಆಸನಗಳನ್ನು ತಿಂಗಳುಗಳ ಕಾಲ ಮಾಡಿದರೆ ಆಗ ಖಂಡಿತವಾಗಿಯೂ ಫಲಿತಾಂಶ ಕಟ್ಟಿಟ್ಟ ಬುತ್ತಿ.
#ಸೂರ್ಯ ನಮಸ್ಕಾರ:ಸೂರ್ಯ ನಮಸ್ಕಾರ ಎನ್ನುವುದು ಸುಮಾರು 12 ಯೋಗಾಸನಗಳನ್ನು ಒಳಗೊಂಡಿರುವ ಒಂದು ಭಂಗಿ. ಪ್ರತಿಯೊಂದು ಭಂಗಿಯೂ ನಿಮ್ಮ ದೇಹದ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಹಿಂದೆ ಮತ್ತು ಮುಂದೆ ಬಾಗುವಿಕೆ ಹಿಗ್ಗುವಿಕೆಗೆ ನೆರವಾಗುತ್ತದೆ. ಈ ವೇಳೆ ದೀರ್ಘ ಉಸಿರಾಟ ತೆಗೆದುಕೊಳ್ಳುವುದರಿಂದ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಸೂರ್ಯನಮಸ್ಕಾರದ ಹೆಚ್ಚಿನ ಲಾಭ ಪಡೆಯಲು ದಿನಾಲೂ ಬೆಳಗ್ಗೆ ಸೂರ್ಯನಿಗೆ ಮುಖವಾಗಿ ಈ ಭಂಗಿಯನ್ನು ಅಭ್ಯಾಸ ಮಾಡಿ.
#ಪಾದಹಸ್ತಾಸನ:ಪಾದಹಸ್ತಾಸನಮುಂದಕ್ಕೆ ಬಾಗುವುದರಿಂದ ಹೊಟ್ಟೆಯು ಸಂಪೂರ್ಣವಾಗಿ ಕುಗ್ಗಿಸಲ್ಪಡುತ್ತದೆ. ಇದರಿಂದ ಹೊಟ್ಟೆಯ ಬೊಜ್ಜು ಕರಗುತ್ತದೆ. ಹಿಗ್ಗುವಿಕೆಯಿಂದ ಹೊಟ್ಟೆಯು ಒಂದು ಆಕಾರಕ್ಕೆ ಬರಲು ನೆರವಾಗುತ್ತದೆ. ಹೊಟ್ಟೆಯ ಬೊಜ್ಜನ್ನು ಕರಗಿಸಲು ಯೋಗಾಸನವನ್ನು ಈ ರೀತಿ ಅಭ್ಯಾಸ ಮಾಡಬಹುದು. ತಡಾಸನ ಭಂಗಿಯಲ್ಲಿ ನಿಂತುಕೊಳ್ಳಿ, ದೇಹದ ಎರಡು ಭಾಗಗಳಲ್ಲಿ ಕೈಗಳನ್ನಿಡಿ ಮತ್ತು ಪಾದಗಳು ಒಂದಕ್ಕೊಂದು ಸ್ಪರ್ಶಿಸುವಂತಿರಲಿ. *ಬೆನ್ನನ್ನು ಬಗ್ಗಿಸಿ ದೀರ್ಘವಾಗಿ ಉಸಿರಾಡಿ, ಕೈಗಳನ್ನು ಮೇಲಕ್ಕೆತ್ತಿ.
*ನೀವು ಉಸಿರನ್ನು ಹೊರಗೆ ಬಿಡುವಾಗ ಸಂಪೂರ್ಣವಾಗಿ ಮುಂದಕ್ಕೆ ಬಾಗಿ ಆಗ ದೇಹವು ನೆಲಕ್ಕೆ ಸಮನಾಂತರವಾಗುವಂತಿರಲಿ.
*ಉಸಿರು ತೆಗೆದುಕೊಳ್ಳಿ ಮತ್ತು ಉಸಿರು ಹೊರಗೆ ಬಿಡಿ, ಸಂಪೂರ್ಣವಾಗಿ ಮುಂದಕ್ಕೆ ಬಾಗಿ ದೇಹವು ಸೊಂಟದಿಂದ ಬೀಳುವಂತಿರಲಿ.
#ಚಕ್ಕಿ ಚಾಲಾಸನ:ಹಿಂದಿನ ಕಾಲದಲ್ಲಿ ಗೋಧಿ, ಅಕ್ಕಿ, ರಾಗಿಯನ್ನು ಕಲ್ಲಿನಿಂದ ಅರೆದು ಹುಡಿ ಮಾಡುತ್ತಿದ್ದರು. ಪ್ರತಿ ಮನೆಗಳಲ್ಲಿ ಕೂಡ ಈ ಹಿಟ್ಟು ಬೀಸುವ ಕಲ್ಲಿತ್ತು ಹಾಗೂ ಗೃಹಿಣಿಯರು ಅದನ್ನು ಬಳಸುತ್ತಿದ್ದರು. ಚಕ್ಕಿಚಾಲಾಸನ ಸೊಂಟ ಹಾಗೂ ಹೊಟ್ಟೆಗೆ ಉತ್ತಮ ವ್ಯಾಯಾಮವನ್ನು ನೀಡುತ್ತದೆ. ಮೊದಲಿಗೆ ಬೆರಳುಗಳನ್ನು ಪರಸ್ಪರ ಹೆಣೆದುಕೊಳ್ಳಿ ಎರಡೂ ಕಾಲುಗಳನ್ನು ಅಂತರದಲ್ಲಿರಿಸಿಕೊಳ್ಳಿ ಅಂದರೆ ನಡುವೆ ಹಿಟ್ಟು ಬೀಸುವ ಕಲ್ಲಿದೆ ಎಂಬ ಭಾವನೆ ಮನಸ್ಸಿನಲ್ಲಿರಲಿ. ನಿಮ್ಮ ಮೊಣಕೈಯನ್ನು ನೇರವಾಗಿಟ್ಟುಕೊಳ್ಳಿ ಹಾಗೂ ಭುಜಕ್ಕೆ ಸಮನಾಗಿ ತೋಳುಗಳನ್ನು ನಿಮ್ಮ ಮುಂಭಾಗದಲ್ಲಿರಿಸಿ. ದೀರ್ಘ ಉಸಿರನ್ನು ತೆಗೆದುಕೊಂಡು ನಿಯಂತ್ರಣ ಕಳೆದುಕೊಳ್ಳದೆಯೇ ಎಷ್ಟು ಸಾಧ್ಯವೋ ಅಷ್ಟು ಹಿಂದಕ್ಕೆ ಬಾಗಿ.
#ಕಪಾಲಭಾತಿ: ಈ ಬಗ್ಗೆ ನಿಮ್ಮಲ್ಲಿ ಬಹುತೇಕರು ತಿಳಿದಿರಬಹುದು. ಇದೊಂದು ಸಾಕಷ್ಟು ಪ್ರಯೋಜನ ನೀಡುವ ಅದ್ಭುತ ಯೋಗಾಸನದ ವಿಧಿಯಾಗಿದೆ. ಆರಾಮದಾಯಕವಾದ ಸ್ಥಳದಲ್ಲಿ ಕಾಲು ಮಡಚಿ ಸ್ಥಿರವಾಗಿ ಕೂರಿ ಹಾಗೂ ನಿಮ್ಮ ಬೆನ್ನು ಹುರಿ ನೇರವಾಗಿ ಇರಲಿ. ನಿಮ್ಮ ಅಂಗೈಗಳ ರೇಖೆಗಳು ಹೊರಗೆ ಕಾಣುತ್ತಿರುವಂತೆ ಮೊಣಕಾಲಿನ ಮೇಲೆ ಇರಿಸಿ. ಉಸಿರನ್ನು ಸಹಜವಾಗಿ ಒಳಗೆ ತೆಗೆದುಕೊಂಡು ಅದನ್ನು ಹೊರ ಬಿಡುವಾಗ ತ್ವರಿತವಾಗಿಯೂ, ಬಲಪೂರ್ವಕವಾಗಿ ಹೊರ ಬಿಡಿ.