ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಒದಗಿಸುವ ‘ಸಖಿ ಯೋಜನೆ’ ಗಣೇಶ ಹಬ್ಬಕ್ಕೆ ಜಾರಿ

ಪುರುಷರಂತೆ ಎಲ್ಲ ರಂಗದಲ್ಲೂ ಸಮಾನವಾಗಿ ಮುಂದಿರಲು ಬಯಸುವ ಮಹಿಳೆಯರಿಗೆ ಕರ್ನಾಟಕ ರಾಜ್ಯ ಸರ್ಕಾರ ಗೌರಿ ಗಣೇಶ ಹಬ್ಬಕ್ಕೆ ಸಿಹಿ ಸುದ್ದಿ ನೀಡಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಹಿಳೆಯರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ‘ಸಖಿ ಭಾಗ್ಯ’ ಯೋಜನೆ ಜಾರಿಗೆ ಮುಂದಾಗಿದೆ.ವಿವಿಧ ಉದ್ಯೋಗ ಅವಕಾಶಗಳನ್ನು ಗ್ರಾಮೀಣ ಮಹಿಳೆಯರಿಗೂ ಒದಗಿಸುವ ಮಹತ್ತರ ಉದ್ದೇಶದಿಂದ ರಾಜ್ಯ ಸರ್ಕಾರ ಈ ‘ಸಖಿ ಭಾಗ್ಯ’ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ಪಂಚಾಯಿ ವ್ಯಾಪ್ತಿಯಲ್ಲಿ ಒಟ್ಟು 30 ಸಾವಿರ ಮಹಿಳೆಯರಿಗೆ ಉದ್ಯೋಗ ಲಭ್ಯವಾಗಲಿವೆ. ಹಳ್ಳಿ ಪ್ರದೇಶಗಳಲ್ಲಿ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಈ ಯೋಜನೆ ಪೂರಕವಾಗಿ ಕಾರ್ಯ ನಿರ್ವಹಿಸಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಉನ್ನತ ಶಿಕ್ಷಣ, ಐಟಿ ಬಿಟಿ ಮತ್ತು ಜೀವನೋಪಾಯ ಅಭಿಯಾನ ಸಚಿವ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಅವರು, ‘ಸಖಿ’ ಯೋಜನೆಯ ಪರಿಕಲ್ಪನೆ ಮೂಲಕ ವಿವಿಧ ಉದ್ಯೋಗಗಳನ್ನು ಒದಗಿಸಿ ಗ್ರಾಮೀಣ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲಾಗುವುದು. ಸದ್ಯ ಯೋಜನೆ ಕುರಿತು ಮಾಹಿತಿ ನೀಡಿರುವ ರಾಜ್ಯ ಸರ್ಕಾರ ಆಗಸ್ಟ್ 31ರಂದು ‘ಗೌರಿ ಗಣೇಶ ಹಬ್ಬದಂದು’ ಸಖಿ ಯೋಜನೆ ರಾಜ್ಯದಲ್ಲಿ ಜಾರಿ ಮಾಡುವ ಮೂಲಕ ಅಧಿಕೃತಗೊಳಿಸಲಿದೆ ಎಂದು ತಿಳಿಸಿದರು.
- ಸಖಿ ಯೋಜನೆ’ಯಡಿ ತರಬೇತಿ
ಈ ನೂತನ ‘ಸಖಿ ಯೋಜನೆ’ಯ ಅಂಗವಾಗಿ ಕೃಷಿ ಸಖಿ, ಹೈನುಗಾರಿಕೆ ಸಖಿ, ವನ ಸಖಿ, ಬ್ಯಾಂಕ್ ವಹಿವಾಟು ಸಖಿ, ಡಿಜಿಟಲ್ ಪಾವತಿ ಸಖಿ ರೂಪದಲ್ಲಿ ಮಹಿಳೆಯರಿಗೆ ಉದ್ಯೋಗಗಳ ಕುರಿತು ಸೂಕ್ತ ತರಬೇತಿ ನೀಡಲಾಗುವುದು. ತರಬೇತಿ ಮೂಲಕ ಕೌಶಲ್ಯ ಪಡೆಯುವ ಮಹಿಳೆಯರು ಉದ್ಯೋಗ ಪಡೆದು ಅಭಿವೃದ್ಧಿ ಕಾಣುತ್ತಿರುವ ಹಳ್ಳಿ ಪ್ರದೇಶಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಲಿದ್ದಾರೆ. ಮಹಿಳೆಯರು ನೆಮ್ಮದಿಯ ಸ್ವಾವಲಂಬಿ ಜೀವನ ನಡೆಸಲು ಯೋಜನೆ ಅನುಕೂಲವಾಗಲಿದೆ ಎಂದರು.
ಜನರ ಜೀವನೋಪಾಯ ವೃದ್ಧಿಗೆ ಆದ್ಯತೆಗ್ರಾಮೀಣ ಜನರ ಜೀವನೋಪಾಯ ಅಭಿವೃದ್ಧಿ ಹಾಗೂ ಮಹಿಳೆಯರಿಗೆ ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಯೋಜನೆ ಜಾರಿಗೆ ನಿರ್ಧರಿಸಿದೆ. ಶಿಕ್ಷಣ ಕಲಿತು ಉದ್ಯೋಗ ವಂಚಿತರಾಗಿರುವ ಗ್ರಾಮೀಣ ಮಹಿಳೆಯರಲ್ಲಿ ಈ ನಿರ್ಧಾರ ಸಂತಸ ಮೂಡಿಸಿದೆ. ಸ್ಥಳೀಯ ಮಟ್ಟದಲ್ಲಿ ಮಹಿಳೆಯರು ಉದ್ಯೋಗ ಹೊಂದಲು ಯೋಜನೆ ನೆರವಾಗಲಿದೆ.
ಗ್ರಾ.ಪಂ.ಗೆ ಐವರು ಸಖಿಯರು ನೇಮಕ;ಸರ್ಕಾರ ಕೇವಲ ಯೋಜನೆ ಜಾರಿಗೊಳಿಸಿ ಅಧಿಕಾರಿಗಳ ಜವಾಬ್ದಾರಿ ವಹಿಸಿ ಸುಮ್ಮನಾಗದೇ ಕೆಲಸಕ್ಕೆ ಅಗತ್ಯವಾದ ಕೌಶಲ್ಯ, ತರಬೇತಿಗಳನ್ನು ನೀಡಲಾಗುತ್ತಿದೆ. ಅದಕ್ಕೆಂದೆ ಗ್ರಾಮ ಪಂಚಾಯಿತಿಗೆ ಐವರು ಮಂದಿ ಸಖಿಯರನ್ನು ನೇಮಕ ಮಾಡಲಾಗುತ್ತಿದೆ. ಈ ಕೃಷಿ ಸಖಿಯರು ಸೆಪ್ಟೆಂಬರ್ 5ರಂದು ಮಹಿಳೆಯರಿಗೆ ತರಬೇತಿ ಆರಂಭಿಸಲಿದ್ದಾರೆ ಎಂದು ಅವರು ವಿವರಿಸಿದರು.ಗ್ರಾಮೀಣ ಮಹಿಳೆಯರ ಉದ್ಯೋಗದ ಕನಸನ್ನು ನನಸು ಮಾಡಲು ಸರ್ಕಾರ ಮಹತ್ವ ಹೆಜ್ಜೆ ಇಟ್ಟಿದೆ. ಸಖಿ ಯೋಜನೆ ಮೂಲಕ ಸರ್ಕಾರವು ಗೌರಿ ಗಣೇಶ ಹಬ್ಬಕ್ಕೆ ಮಹಿಳೆಯರಿಗೆ ಬಾಗಿನದ ರೂಪದಲ್ಲಿ ‘ಸಖಿ ಭಾಗ್ಯವನ್ನು’ ಅನುಷ್ಠಾನಗೊಳಿಸಲು ಸಿದ್ಧವಾಗಿದೆ ಎಂದು ಅಶ್ವಥ್ ನಾರಾಯಣ್ ತಿಳಿಸಿದರು.