ಚಂಚಲ ಮನಸ್ಸನ್ನು ಹತೋಟಿಗೆ ತರಲು ಧ್ಯಾನ ಮಾಡಿ;

ಸದಾ ಒತ್ತಡದಲ್ಲಿರುವ ಮಂದಿ ಮಾನಸಿಕವಾಗಿ ಒಂದಷ್ಟು ರಿಲ್ಯಾಕ್ಸ್ ಆಗುವಂತೆ ಮಾಡಲು ಇದೀಗ ಧ್ಯಾನ ಕೇಂದ್ರಗಳು ಹುಟ್ಟಿಕೊಂಡಿದ್ದು, ಇದಕ್ಕೆ ಸೇರ್ಪಡೆಗೊಳ್ಳುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆಧ್ಯಾತ್ಮದಲ್ಲಿಯೂ ಧ್ಯಾನದ ಮಹತ್ವದ ಬಗ್ಗೆ ಸವಿರವಾಗಿ ಹೇಳಲಾಗಿದೆ. ಸದಾ ಒತ್ತಡದಲ್ಲಿ ಚಂಚಲವಾಗಿರುವ ಮನಸ್ಸನ್ನು ಹತೋಟಿಗೆ ತರಲು ಧ್ಯಾನ ಪರಿಣಾಮಕಾರಿಯಾದ ಮಾರ್ಗವಾಗಿದೆ ಎಂದು ವಿವರಿಸಲಾಗಿದೆ.

ನಿರ್ದಿಷ್ಟ ಸ್ಥಳದಲ್ಲಿ, ನಿರ್ದಿಷ್ಟ ಸಮಯದಲ್ಲಿ ಏಕಚಿತ್ತವಾಗಿ ಭಗವಂತನ ಧ್ಯಾನದಲ್ಲಿ ತೊಡಗುವುದರಿಂದ ಮನೋನಿಗ್ರಹ ಸಾಧ್ಯವಾಗುತ್ತದೆ. ಮನೋನಿಗ್ರಹವಾದರೆ ನಮ್ಮ ಧ್ಯಾನಕ್ಕೆ ಅರ್ಥ ಸಿಗುತ್ತದೆ. ಇಲ್ಲದೆ ಹೊದರೆ ಭಗವಂತನ ಧ್ಯಾನದಲ್ಲಿ ತೊಡಗಿದ್ದರೂ ಮತ್ತೊಂದೆಡೆ ಮನಸ್ಸು ಮತ್ತೆಲ್ಲೋ ಹರಿಯುತ್ತಿರುತ್ತದೆ. ಇದರಿಂದ ಯಾವುದೇ ಪ್ರಯೋಜನವಾಗಲಾರದು.

ನಾವು ದೇವಸ್ಥಾನಕ್ಕೆ ಹೋದಾಗ ದೇವರ ಧ್ಯಾನದಲ್ಲಿಯೇ ಇರುವ ಕಾರಣ ಮನಸ್ಸು ಪ್ರಶಾಂತವಾಗಿ ಏನೋ ಒಂದು ರೀತಿಯ ಮಾನಸಿಕ ನೆಮ್ಮದಿ ದೊರೆತಂತಾಗುತ್ತದೆ. ಕೆಲವು ಮಂದಿ ಮಾನಸಿಕ ಕ್ಷೋಭೆಗೆ ಒಳಗಾದಾಗ ದೇವಾಲಯಕ್ಕೆ ಹೋಗಿ ಒಂದಷ್ಟು ಹೊತ್ತು ಇದ್ದು, ದೇವರ ಧ್ಯಾನದಲ್ಲಿ ತೊಡಗಿದ್ದು ಬರುವುದನ್ನು ರೂಢಿಸಿಕೊಂಡಿರುತ್ತಾರೆ. ಇದರಿಂದ ಆ ಕ್ಷಣಕ್ಕೆ ಮಾನಸಿಕ ನೆಮ್ಮದಿ ದೊರೆತು, ಸಮಸ್ಯೆಗಳನ್ನು ಎದುರಿಸಲು ಸಾಧ್ಯವಾಗುತ್ತದೆ.

ನಾವು ನಮ್ಮ ಸುತ್ತಲಿನ ವಾತಾವರಣದಲ್ಲಿ ಯಾವುದು ಪರಿಶುದ್ಧವೋ ಅಥವಾ ಯಾವುದು ಮನಸ್ಸನ್ನು ಶುದ್ಧಗೊಳಿಸಬಲ್ಲದೋ ಅಂತಹದ್ದನ್ನೇ ಸ್ವೀಕರಿಸಬೇಕು. ಇಲ್ಲವೆ ಅಂತಹ ವಿಚಾರದ ಕಡೆಗೆ ನಮ್ಮ ಮನಸ್ಸನ್ನು ಹೊರಳಿಸಬೇಕು. ಇಂತಹದಕ್ಕೆ ಭಗವಂತನ ಕುರಿತ ಧ್ಯಾನ ಅಗತ್ಯವಾಗಿ ಬೇಕಾಗುತ್ತದೆ. ಏಕೆಂದರೆ ಆಧ್ಯಾತ್ಮದಲ್ಲಿ ಹೀಗೊಂದು ಮಾತಿದೆ. ಯಾರು ಯಾವುದನ್ನು ಕುರಿತು ಧ್ಯಾನಿಸುತ್ತಾರೆಯೋ ಅವರು ಅದೇ ಆಗುತ್ತಾರೆ. ಧ್ಯಾನದಲ್ಲಿ ತೊಡಗಿದಾಗ ಮನಸ್ಸು ಅತ್ತ ಇತ್ತ ಹರಿದಾಡಿದರೆ ಅದನ್ನು ಧ್ಯಾನಿತ ವಿಷಯಕ್ಕೆ ಅವಿಶ್ರಾಂತವಾಗಿ ಒಯ್ದು ನಿಲ್ಲಿಸಬೇಕು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group