ಪರಿಸರ ಸಂರಕ್ಷಣೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು

ಗಿಡ ಮರಗಳು ಹೆಚ್ಚಿದ್ದಷ್ಟೂ ನಮಗೆ ಶುದ್ಧ ಗಾಳಿ ದೊರೆಯುತ್ತದೆ. ಪ್ರಾಕೃತಿಕ ವಿಕೋಪಗಳು ಸಂಭವಿಸುವ ಪ್ರಮಾಣ ಬಹು ಕಡಿಮೆಯಾಗುತ್ತದೆ. ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿಚಿಂತನೆ ನಡೆಸಬೇಕು.
ಒತ್ತಡದಲ್ಲೇ ಜೀವನ ಸಾಗಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಆರೋಗ್ಯ ಬಗ್ಗೆ ಕಾಳಜಿ ವಹಿಸಬೇಕಾದ ಅನಿವಾರ್ಯತೆ ಇದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಸುತ್ತಮುತ್ತಲಿನ ಪರಿಸರವೂ ಶುದ್ಧವಾಗಿರಬೇಕು. ವಿದ್ಯಾವಂತ ಯುವಕರು ಹಾಗೂ ಪ್ರಜ್ಞಾವಂತ ನಾಗರಿಕರು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಇತರರಿಗೂ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು.
ಪ್ರಕೃತಿಗೆ ಮಾನವನ ಎಲ್ಲಾ ಆಸೆಗಳನ್ನು ಪೂರೈಸುವ ಶಕ್ತಿ ಇದೆ. ಆದರೆ ಅವನ ದುರಾಸೆಯನ್ನಲ್ಲ . ಇಂದು ಜನರು ಪ್ರಕೃತಿಯ ಮೇಲೆ ದೌರ್ಜನ್ಯವನ್ನೆಸಗುತ್ತಿದ್ದಾರೆ. ಪರಿಸರವನ್ನು ಹಾಳುಗೆಡವುತ್ತಿದ್ದಾರೆ.
ಆದರೆ ಪ್ರಕೃತಿಯು ಸುನಾಮಿ, ನೈಸರ್ಗಿಕ ವಿಕೋಪಗಳಂತಹ ತಿರುಗೇಟನ್ನು ಕೊಟ್ಟರೆ ಎಷ್ಟೇ ಶಕ್ತಿವಂತ, ಸಿರಿವಂತ ಮಾನವರಾದರೂ ಅವರು ಪ್ರಕೃತಿಯ ಶಕ್ತಿಯ ಎದುರು ಕುಬ್ಜರೇ ಸರಿ. ಇದನ್ನರಿತು ನಡೆಯಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯ.ಪರಿಸರ ನಾಶ ಮಾಡಿದರೆ ತಾನು ತನಗೇ ಹಾನಿ ಮಾಡಿಕೊಂಡಂತೆ ಎಂಬುದನ್ನು ನಾವು ಅರಿಯಬೇಕು. ಪರಿಸರ ನಾಶರಹಿತ ಅಭಿವೃದ್ದಿಯನ್ನು ಸಾಧಿಸುವ ಪಥದಲ್ಲಿ ಸಾಗಬೇಕು. ಪರಿಸರವಿಲ್ಲದೆ ಮಾನವನಿಲ್ಲ ಎಂಬ ನಿತ್ಯ ಸತ್ಯವನ್ನು ಜೀವನದ ಗುರಿಯನ್ನಾಗಿಸಿಕೊಂಡು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಶಪಥಕ್ಕೆ ಕಟ್ಟುಬದ್ಧರಾಗೋಣ.