ಜುಲೈ 29- ಅಂತರಾಷ್ಟ್ರೀಯ ಹುಲಿ ದಿನ;

ಹುಲಿ ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ. ಇದು ಗಂಭೀರವಾದ ಮತ್ತು ಭವ್ಯವಾದ ಪ್ರಾಣಿ, ಪರಿಸರ ವ್ಯವಸ್ಥೆಯ ಆರೋಗ್ಯ ಮತ್ತು ವೈವಿಧ್ಯತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಅಗ್ರ ಪರಭಕ್ಷಕ ಮತ್ತು ಆಹಾರ ಸರಪಳಿಯ ತುದಿಯಲ್ಲಿರುತ್ತದೆ. ಕಾಡಿನ ಸಸ್ತನಿ ಪ್ರಾಣಿಗಳ ಜನಸಂಖ್ಯೆಯನ್ನು ನಿಯಂತ್ರಣದಲ್ಲಿಡಲು ಹುಲಿಗಳು ಕೊಡುಗೆ ನೀಡುತ್ತವೆ, ಏಕೆಂದರೆ ಬೇಟೆಯಾಡುವ ಸಸ್ಯಹಾರಿಗಳ ಸಮತೋಲನ ಮತ್ತು ಅವು ಆಹಾರ ನೀಡುವ ಸಸ್ಯವರ್ಗವನ್ನು ಕಾಪಾಡಿಕೊಳ್ಳುತ್ತವೆ. ಮರಗಳನ್ನು ಕಡಿಯುವುದರಿಂದ ಆವಾಸಸ್ಥಾನಗಳ ನಷ್ಟ, ಬೇಟೆ ಮತ್ತು ಹುಲಿಯ ದೇಹದ ಭಾಗಗಳ ಅಕ್ರಮ ವ್ಯಾಪಾರ – ಇವುಗಳು ಹುಲಿಗಳ ಜನಸಂಖ್ಯೆಯ ಕುಸಿತದ ಹಿಂದಿನ ಕೆಲವು ಪ್ರಮುಖ ಅಂಶಗಳಾಗಿದೆ. ದುರದೃಷ್ಟವಶಾತ್, ಅಳಿವಿನ ಸಮೀಪದಲ್ಲಿರುವ ಪ್ರಾಣಿಗಳ ಪ್ರಭೇದಗಳಲ್ಲಿ ಹುಲಿಗಳೂ ಒಂದು. ಆದ್ದರಿಂದ, ಹುಲಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು, ಅಂತಾರಾಷ್ಟ್ರೀಯ ಹುಲಿ ದಿನ ಅಥವಾ ಜಾಗತಿಕ ಹುಲಿ ದಿನವನ್ನು ಪ್ರತಿವರ್ಷ ಜುಲೈ 29 ರಂದು ಆಚರಿಸಲಾಗುತ್ತದೆ.
#ಏನಿದು ಹುಲಿ ದಿನ?
ಹುಲಿ ಸಂರಕ್ಷಣೆ ಮತ್ತು ಸಾರ್ವಜನಿಕರಲ್ಲಿ ಹುಲಿಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 2010 ರ ಜುಲೈ 29ರಂದು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಹುಲಿ ದಿನವನ್ನು ರಷ್ಯಾದ ಸೆಂಟ್ ಪೀಟರ್ ಬರ್ಗ್‍ನಲ್ಲಿ ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಜುಲೈ 29 ರಂದು ಅಂತರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದಂದು ಹುಲಿ ಸಂರಕ್ಷಣೆ ಕುರಿತು ಚರ್ಚೆ, ಉಪನ್ಯಾಸ, ಜಾಥಾ, ವಿಚಾರ ಸಂಕಿರಣ ಹಾಗೂ ಛಾಯಾಚಿತ್ರ ಪ್ರದರ್ಶನ ದೇಶಾದ್ಯಂತ ನಡೆಯುತ್ತದೆ. ಇಂದಿನ ದಿನಗಳಲ್ಲಿ ಹುಲಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮತ್ತು ಹುಲಿ ಸಂರಕ್ಷಣೆಯನ್ನು ಉತ್ತೇಜಿಸುವುದು ಈ ಆಚರಣೆಯ ಪ್ರಮುಖ ಉದ್ದೇಶವಾಗಿದೆ.
#ರಾಷ್ಟ್ರೀಯ ಪ್ರಾಣಿಹುಲಿ
ಪ್ಯಾಂಥೆರಾ ವಂಶಕ್ಕೆ ಸೇರಿದ 4 ದೊಡ್ಡ ಬೆಕ್ಕುಗಳ ಪೈಕಿ ಹುಲಿ ಅತ್ಯಂತ ದೊಡ್ಡ ಪ್ರಾಣಿ. ಹುಲಿಯು 4 ಮೀ. ವರೆಗೆ (13 ಅಡಿ) ಉದ್ದವನ್ನು ಹಾಗೂ 300 ಕಿ.ಗ್ರಾಂ ವರೆಗೆ ತೂಕವನ್ನು ಹೊಂದಬಹುದು. ದೊಡ್ಡ ದೇಹ ಮತ್ತು ಅಪಾರ ಬಲ ಹೊಂದಿರುವ ಹುಲಿಯ ಕಣ್ಸೆಳೆಯುವ ಲಕ್ಷಣವೆಂದರೆ ಬಿಳಿ ಅಥವಾ ಹಳದಿಯಾ ಕೇಸರಿ ಬಣ್ಣದ ಮೈ ಮೇಲೆ ನೀಳವಾಗಿ ಮೇಲಿನಿಂದ ಕೆಳಗೆ ಇರುವ ಗಾಢ ಬಣ್ಣದ ಪಟ್ಟೆಗಳು ಇವೆ. ಚುರುಕುತನ ಮತ್ತು ಅಪಾರ ಸಾಮರ್ಥ್ಯ ಸಮ್ಮಿಳಿತವಾದ ಪ್ರಾಣಿಯಾದ ಹುಲಿಗೆ ಭಾರತದಲ್ಲಿ ರಾಷ್ಟ್ರ ಪ್ರಾಣಿ ಎಂಬ ಗೌರವಾನ್ವಿತ ಸ್ಥಾನ ದೊರಕಿದೆ.ಹುಲಿ, ಹೆಬ್ಬುಲಿ, ವ್ರಾಘ್ಯರಾಜನಿಗಾಗಿ ಈ ಜುಲೈ 29ನೇ ತಾರೀಖು ಮೀಸಲಾಗಿದೆ. ಹುಲಿ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಯಾವ ದಿನವಾದರೇನು? ಪ್ರತಿದಿನ ಪ್ರತಿಕ್ಷಣ ನಮ್ಮ ರಾಷ್ಟ್ರೀಯ ಪ್ರಾಣಿಯನ್ನು ಸಂರಕ್ಷಣೆ ಮಾಡೋಣ