ಉತ್ತಮ ಆರೋಗ್ಯಕ್ಕಾಗಿ ಈ ಸಲಹೆ..!

ವಾತಾವರಣದಲ್ಲಾಗುವ ಬದಲಾವಣೆ ಮತ್ತು ಹವಾಮಾನಕ್ಕೆ ಅನುಗುಣವಾಗಿ ಮಾನವನಿಗೆ ನೆಗಡಿ, ಶೀತ, ಜ್ವರ, ತಲೆನೋವು ವಾಂತಿ, ಭೇಧಿ ಇಂತಹ ಸಣ್ಣ ಪುಟ್ಟ ಶಾರೀರಿಕ ಅಸ್ವಸ್ಥತೆ ಬಂದೇ ಬರುತ್ತದೆ. ಇಂತಹ ಅನಾರೋಗ್ಯ ಸಮಸೈಗಳಿಗೆ ದೊಡ್ಡ ದೊಡ್ಡ ಪ್ರತಿಷ್ಠಿತ ಆಸ್ವತ್ರೆಗಳು, ವೈದ್ಯರು, ಜೌಷಧಿ ಎಂದು, ಕಷ್ಟಪಟ್ಟು ದುಡಿದು ಸಂಪಾದಿಸಿದ ದುಡ್ಡನ್ನು ಸುರಿದು ಹಾಳು ಮಾಡುವುದು ವ್ಯರ್ಥ. ಬದಲಾಗಿ ಔಷದದ ಭಂಡಾರವೆಂದೇ ಕರೆಯಲ್ಪಡುವ ಅಡುಗೆ ಮನೆಯಲ್ಲಿ ಇರುವ ಪದಾರ್ಥಗಳಾದ ಸಕ್ಕರೆ, ಉಪ್ಪು, ನೀರು, ಅರಸಿನ, ಜೀರಿಗೆ, ಧನಿಯ, ಮೆಂತ್ಯ, ಶುಂಠಿ, ಏಲಕ್ಕಿ, ಲವಂಗ, ಕಾಳು ಮೆಣಸು, ಅಕ್ಕಿ, ಹಾಲು, ಈರುಳ್ಳಿ, ಬೆಳ್ಳುಳ್ಳಿ, ನಿಂಬೆಹಣ್ಣು ಇವುಗಳ ಔಷಧೀಯ ಗುಣವನ್ನು ತಿಳಿದು ರೋಗಕ್ಕೆ ತಕ್ಕಂತೆ ಬಳಸಿದರೆ ನಮ್ಮ ಬದುಕು ಬಂಗಾರವಾಗುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ.
1. ನಿಶ್ಯಕ್ತಿ ಅಥವಾ ನಿತ್ರಾಣದಿಂದ ಬಳಲುವ ವ್ಯಕ್ತಿಗೆ ಆಗಾಗ ಶುದ್ಧನೀರಿಗೆ ಸ್ವಲ್ಪ ಉಪ್ಪು ಸ್ವಲ್ಪ ಸಕ್ಕರೆ ಹಾಕಿ ಮಿಶ್ರಮಾಡಿದ ದ್ರವಾಹಾರವನ್ನು ಆಗಾಗ ಕೊಡುತ್ತಿದ್ದರೆ ನಿತ್ರಾಣ ಕಮ್ಮಿಯಾಗುತ್ತದೆ. ಶರೀರದಲ್ಲಿ ನೀರಿನ ಅಂಶ ಕಡಿಮೆಯಾಗುವುದಿಲ್ಲ.
2. ಮನೆಯಲ್ಲೇ ಮಾಡಿದ ಆಹಾರ ಸೇವನೆಗೆ ಆದ್ಯತೆ. ಮನೆಯಲ್ಲಿ ಶುಚಿಗೆ ರುಚಿಗೆ ಪ್ರಾಮುಖ್ಯತೆ ನೀಡುವುದರಿಂದ ಉತ್ತಮ ಆರೋಗ್ಯಕ್ಕೆ ಇದು ಸಹಕಾರಿ,3. ಬೊಜ್ಜು ನಿವಾರಣೆಗಾಗಿ ಕುಸುಬುಲಕ್ಕಿ ಅಥವಾ ಕುಚ್ಚಿಲಕ್ಕಿ ಗಂಜಿ ವಾರಕ್ಕೆ ಎರಡು ಬಾರಿ ಸೇವಿಸುವುದು.
4.ವಾರಕ್ಕೊಮ್ಮೆ ಎಣ್ಣೆ ಸ್ನಾನ, ಕೊಬ್ಬರಿ ಎಣ್ಣೆ ಅಥವಾ ಸಾಸಿವೆ ಎಣ್ಣೆಯಿಂದ ಲಘುವಾಗಿ ಮಸಾಜ್ ಮಾಡಿ ಹಿತವಾದ ಬಿಸಿನೀರಿನ ಸ್ನಾನ ಚರ್ಮ ಕಾಂತಿಯುತವಾಗಿ, ಮೃದುತ್ವವನ್ನು ಕಾಪಾಡಿಕೊಂಡು ಬರಲು ಸಹಕಾರಿ. ಚರ್ಮ ಬಿರುಸಾಗುವಿಕೆಯನ್ನು ತಡೆಯುತ್ತದೆ.
5. ಅತ್ಯಂತ ಹೆಚ್ಚು ನೀರು ಸೇವಿಸುವುದು. ದಿನಕ್ಕೆ 7 ರಿಂದ 10 ಲೋಟದಷ್ಟು ನೀರು ಕುಡಿಯಬೇಕು. ಶರೀರದಲ್ಲಿ ನಡೆಯುವ ಎಲ್ಲಾ ಕ್ರಿಯೆಗಳಿಗೂ ನೀರು ಬೇಕು. ಇದರಿಂದ ಜೀರ್ಣಕ್ರಿಯೆ, ಕಲ್ಮಶ ವಿಸರ್ಜನೆಗೆ ಸಹಾಯವಾಗುತ್ತದೆ.
6. ಅತಿಯಾಗಿ ಮೂಗಲ್ಲಿ ಸಿಂಬಳ/ ನೆಗಡಿ ಸೋರುತ್ತಿದ್ದರೆ ಒಂದು ಬಟ್ಟಲು ಸಿಹಿ ಮೊಸರಿಗೆ ಬೆಲ್ಲ ಸೇರಿಸಿ 4 ರಿಂದ 5 ದಿವಸಗಳ ಕಾಲ ತಿಂದರೆ ಸಾಕು. ನೆಗಡಿ ಕಮ್ಮಿ ಆಗುತ್ತದೆ.
7. ತಲೆ ಸುತ್ತು, ವಾಕರಿಗೆ, ಪ್ರಯಾಣದ ಆಯಾಸ ಇದ್ದಾಗ ಒಂದು ಲೋಟ ನೀರಿಗೆ ನಿಂಬೆಹಣ್ಣಿನ ರಸ ಮತ್ತು ಉಪ್ಪು ಹಾಕಿದ (ನಿಂಬೆ ಪಾನಕ) ಕುಡಿಯಿರಿ.
8. ಗಂಟಲು ಕೆರೆತ, ಕೆಮ್ಮು, ಧ್ವನಿ ಬಾರದೆ ಇದ್ದಾಗ ಒಂದೆರಡು ಲವಂಗ, ಶುಂಠಿ ಚೂರು, 2 ಕಾಳು ಮೆಣಸು, 2 ಕಲ್ಲು ಉಪ್ಪು ಬಾಯಿಗೆ ಹಾಕಿ ನಿಧಾನವಾಗಿ ಜಗಿದು ಚಪ್ಪರಿಸುತ್ತ ಇದ್ದರೆ ಗಂಟಲು ಕಿರಿಕಿರಿ ಶಮನವಾಗುತ್ತದೆ.
9. ಹೊಟ್ಟೆ ಉಬ್ಬರ, ತಲೆ ಸುತ್ತುವಿಕೆಗೆ:- ಒಣದ್ರಾಕ್ಷಿಯನ್ನು ರಾತ್ರಿ ನೀರಲ್ಲಿ ನೆನೆಸಿಟ್ಟು ಬೆಳಿಗ್ಗೆ ಸ್ವಲ್ಪ ಕಲ್ಲು ಸಕ್ಕರೆ ಹಾಕಿ ಕಿವುಚಿ ಕುಡಿಯಬೇಕು ಇದರಿಂದ ರಕ್ತವೂ ಶುದ್ಧಿಯಾಗುತ್ತದೆ. ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ. ಮಲ ವಿಸರ್ಜನೆಗೂ ಸಹಾಯಕಾರಿ.
10.ಉಬ್ಬಸ/ಅಸ್ತಮದಿಂದ ಬಳಲುವವರು ದಿನಾ ಹಾಲಿನ್ಲಿ 5 ರಿಂದ 6 ಬೆಳ್ಳುಳ್ಳಿ ತೊಳೆದು ಬೇಯಿಸಿ ಊಟದ ನಂತರ ತಿನ್ನಬೇಕು. ಇದರಿಂದ ಉಬ್ಬಸ ನಿಧಾನವಾಗಿ ಕಡಿಮೆಯಾಗುವುದು.