ಕರ್ನಾಟಕದಲ್ಲಿ ಭಾರಿ ಮಳೆ ಹಿನ್ನಲೆಯಲ್ಲಿ: ದೀರ್ಘಾವಧಿ ಬೆಳೆಗೆ ತಜ್ಞರ ಸಲಹೆ..!

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಪ್ರಕಾರ, ಜುಲೈ 1 ರಿಂದ ಇಲ್ಲಿಯವರೆಗೆ, ರಾಜ್ಯದಲ್ಲಿ 92 ಮಿಮೀ ವಾಡಿಕೆ ಮಳೆಗೆ ಹೋಲಿಸಿದರೆ 184 ಮಿಮೀ ಮಳೆಯಾಗಿದೆ. ಮಲೆನಾಡು ಮತ್ತು ಕರಾವಳಿ ಕರ್ನಾಟಕದಲ್ಲಿ ಭಾರಿ ಮಳೆ ದಾಖಲಾಗಿದೆ. ಕರ್ನಾಟಕದಲ್ಲಿ ಸಾಮಾನ್ಯವಾಗಿ ಪ್ರತಿ ವರ್ಷ ಜುಲೈ ಮೂರನೇ ವಾರದಲ್ಲಿ ಭಾರಿ ಮಳೆ ದಾಖಲಾಗುತ್ತದೆ. ಆದರೆ ಈ ವರ್ಷ ಎರಡು ವಾರ ಮುಂದುವರಿದಿರುವುದರಿಂದ ರೈತರಿಗೆ ದೀರ್ಘಾವಧಿ ಬೆಳೆಗೆ ಹೋಗಲು ಹೆಚ್ಚುವರಿ ಸಮಯ ಸಿಕ್ಕಿದೆ ಎಂದು ಕೃಷಿ ವಿಜ್ಞಾನಿ ಮತ್ತು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ (ಯುಎಎಸ್) ಮಾಜಿ ರಿಜಿಸ್ಟ್ರಾರ್ ಪ್ರೊ.ಎಂ.ಬಿ.ರಾಜೇಗೌಡ ತಿಳಿಸಿದ್ದಾರೆ.
ಸ್ಥಳೀಯ ವಿಶ್ವವಿದ್ಯಾನಿಲಯದ ತಜ್ಞರ ನೆರವಿನೊಂದಿಗೆ ರೈತರು ಮಣ್ಣಿನ ವೈವಿಧ್ಯತೆಗೆ ಅನುಗುಣವಾಗಿ ಕೆಂಪುಬೇಳೆ, ರಾಗಿ, ಜೋಳ, ಮೆಕ್ಕೆಜೋಳ ಮತ್ತು ಕಡಲೆಕಾಯಿ ಬೆಳೆ ಬೆಳೆಯಬಹುದು. ಇದನ್ನು ಜುಲೈ ಅಂತ್ಯದವರೆಗೆ ಬಿತ್ತನೆ ಮಾಡಬಹುದು. ರೈತರು 90 ಅಥವಾ ಮೂರು ತಿಂಗಳ ಬದಲಿಗೆ ನಾಲ್ಕು ತಿಂಗಳು ಅಥವಾ 135 ದಿನದ ಬೆಳೆ ಬೆಳೆಯಬಹುದು. ಈ ಬೆಳೆಗಳಿಗೆ ದೀರ್ಘಾವಧಿ, ಹೆಚ್ಚಿನ ಇಳುವರಿ. ಗುಣಮಟ್ಟವೂ ಉತ್ತಮವಾಗಿರುತ್ತದೆ ಮತ್ತು ರೈತರು ಉತ್ತಮ ಬೆಲೆಯನ್ನೂ ನಿರೀಕ್ಷಿಸಬಹುದು ಎಂದು ಅವರು ಹೇಳಿದರು.
- ಮಣ್ಣಿನ ತೇವಾಂಶವು ಹೇರಳ
ಬೇಸಿಗೆಯಲ್ಲಿ ಉತ್ತಮ ಮಳೆಯಾಗಿರುವುದರಿಂದ ಚಾಮರಾಜನಗರ, ಮೈಸೂರು, ಕಲಬುರ್ಗಿ, ಬೀದರ್ ಮತ್ತಿತರ ಕಡೆ ರೈತರು ಅಲ್ಪಾವಧಿ ಬೆಳೆ ಆಯ್ಕೆ ಮಾಡಿಕೊಂಡಿದ್ದಾರೆ. ಹಲವೆಡೆ ರೈತರು ಅಲ್ಪಾವಧಿ ಬೆಳೆಗಳಾದ ಗೋವಿನ ಜೋಳ, ಹಸಿಬೇಳೆ ಸೇರಿದಂತೆ ಏಪ್ರಿಲ್ ನಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ. ಸಾಕಷ್ಟು ಮಳೆಯಿಂದ ಮಣ್ಣಿನ ತೇವಾಂಶವು ಹೇರಳವಾಗಿದ್ದು, ಜೂನ್ ಅಂತ್ಯ ಮತ್ತು ಜುಲೈ ಮೊದಲ ವಾರದ ವೇಳೆಗೆ ರೈತರು ಬೆಳೆ ಪಡೆಯುವಂತೆ ಮಾಡಿತು. ಇನ್ನೂ ಕೆಲವೆಡೆ ರೈತರಿಗೆ ಈ ವರ್ಷ ಎರಡನೇ ಬೆಳೆ ತೆಗೆಯುವಂತೆ ಸಲಹೆ ನೀಡಲಾಗಿದ್ದು, ಇದು ದೀರ್ಘಾವಧಿ ಬೆಳೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.
- ಜುಲೈನಲ್ಲಿ ಉತ್ತಮ ಮಳೆ
ಇದರಿಂದ ರೈತರಿಗೆ ಅನುಕೂಲವಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. ಈ ವರ್ಷದ ಜೂನ್‌ನಲ್ಲಿ, ರಾಜ್ಯವು ವಿಶೇಷವಾಗಿ ಮಲೆನಾಡು ಪ್ರದೇಶದಲ್ಲಿ ಮಳೆಯ ಕೊರತೆಯನ್ನು ಕಂಡಿತು. ಇದೇ ರೀತಿ ಮುಂದುವರಿದರೆ ರೈತರಿಗೆ ತೊಂದರೆಯಾಗಲಿದೆ. ಆದರೆ ಜುಲೈನಲ್ಲಿ ಉತ್ತಮ ಮಳೆಯಾಗಿದ್ದು ಅದೃಷ್ಟವಶಾತ್ ಕೊರತೆಯನ್ನು ಸರಿದೂಗಿಸಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.
- ದ್ವಿದಳ ಧಾನ್ಯಗಳ ಬಿತ್ತನೆ ಶೇ. 7ಕ್ಕೆ ಏರಿಕೆ
ಯಾವಾಗಲೂ ಭತ್ತಕ್ಕೆ ಹೆಚ್ಚು ನೀರಿನ ಅಗತ್ಯವಿರುತ್ತದೆ. ಹೀಗಾಗಿ ಭತ್ತ ಅಷ್ಟಾಗಿ ಬೆಳೆದಿರುವುದು ಕಂಡು ಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ದ್ವಿದಳ ಧಾನ್ಯಗಳ ಬೆಳೆಗಳು ಮುಂಗಾರು ಹಂಗಾಮಿನ ಬೆಳೆಗಳಲ್ಲಿಯೇ ಬಿತ್ತನೆಯಲ್ಲಿ ಕಳೆದ ವರ್ಷ ಶೇ. 4ರಷ್ಟು ಏರಿಕೆ ಕಂಡು ಬಂದಿತ್ತು. ಆದರೆ ಈ ವರ್ಷ ಭತ್ತದ ಪ್ರಮಾಣ ಶೇ. 7ಕ್ಕೆ ಏರಿಕೆ ಕಂಡಿದೆ. ಜೂನ್ ಮೂರು ವಾರದಲ್ಲಿ ಬಿತ್ತನೆ ಅಷ್ಟಾಗಿ ಕಾಣದಿದ್ದರೂ ನಾಲ್ಕನೆ ವಾರದ ಜೂನ್ ಅಂತ್ಯಕ್ಕೆ ಭೂಮಿ ಹದವಾದ ಹಿನ್ನೆಲೆ ಅಧಿಕ ಪ್ರಮಾಣದಲ್ಲಿ ರೈತರು ಬಿತ್ತನೆ ಮಾಡಿದ್ದಾರೆ.
- ಮುಂಗಾರಿನ ಹಂಗಾಮಿನ ಬಿತ್ತನೆ ಏರಿಕೆ
ಈಗ ಮುಂಗಾರು ಮಳೆ ಚುರುಕುಗೊಂಡಿದ್ದು, ಕೃಷಿ ಚಟುವಟಿಕೆಗಳಲ್ಲಿ ಹೊಸ ಉತ್ಸಾಹ ಮೂಡಿದೆ. ಈ ಕಾರಣದಿಂದಲೇ ಕಳೆದ ಜೂನ್ ಅಂತ್ಯದ ವರೆಗೆ ದೇಶದಲ್ಲಿ ಮುಂಗಾರಿನ ಹಂಗಾಮಿನ (ಖಾರೀಫ್) ಬಿತ್ತನೆ ಏರಿಕೆ ಕಂಡು ಬಂದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷದ ಜೂನ್ ಅಂತ್ಯಕ್ಕೆ ಹತ್ತಿ, ಜೋಳ ಸೇರಿದಂತೆ ದ್ವಿದಳ ಧಾನ್ಯಗಳ ಬೆಳೆಗಳ ಬಿತ್ತನೆಯಲ್ಲಿ ಶೇ.7ರಷ್ಟು ಏರಿಕೆ ಕಂಡು ಬಂದಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. ಮುಂಗಾರು ಆರಂಭವಾದ ಹೊಸತರದಲ್ಲಿ ಮಂಕಾಗಿದ್ದ ಮಳೆ ನಂತರ ಚುರುಕೊಂಡಿದ್ದೆ ಖಾರಿಫ್ ಬೆಳೆ ಅಧಿಕ ಬಿತ್ತನೆಗೆ ಕಾರಣವಾಗಿದೆ.