ನೆಲಬೇವಿನ ಔಷಧಿ ಗುಣಗಳು..!

ನೆಲಬೇವು ಎಂಬುದು ಒಂದು ಸಣ್ಣ ಸಸ್ಯವಾಗಿದೆ. ಇದು ಕಹಿಬೇವಿನ ತರಹ ಕಹಿ ರುಚಿಯನ್ನು ಹೊಂದಿರುತ್ತದೆ. ತಮಿಳುನಾಡಿನಲ್ಲಿ ನೆಲಬೇವಿನ ಕಷಾಯವನ್ನು ನಿಲವೆಂಬ ಕಷಾಯ ಎಂದು ಕರೆಯುತ್ತಾರೆ. ನೆಲಬೇವು ಜಗತ್ತಿನಾದ್ಯಂತ “ಕಹಿಯ ರಾಜ” ಎಂದೇ ಪ್ರಸಿದ್ಧವಾಗಿದೆ. ಇದನ್ನು ಮನೆಯ ಸುತ್ತ- ಮುತ್ತ ಬೆಳೆಸಬಹುದಾಗಿದೆ. ನೆಲಬೇವು ತಂಪು ಪ್ರದೇಶದಲ್ಲಿ ಹುಲುಸಾಗಿ ಬೆಳೆಯುತ್ತದೆ. ನೆಲಬೇವಿನ ವೈಜ್ಞಾನಿಕ ಹೆಸರು “ಆಂಡ್ರೋಗ್ರಾಫಿಸ್ ಪ್ಯಾನಿಕ್ಯುಲೇಟ್ “(Andrographic Paniculata)
ನೆಲಬೇವಿನ ಔಷಧಿ ಗುಣಗಳು ;
01.ನೆಲಬೇವು ಮಧುಮೇಹವನ್ನು ನಿಯಂತ್ರಿಸುತ್ತದೆ:ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೆಲಬೇವಿನ ಎಲೆಗಳನ್ನು ತಿನ್ನಬಹುದಾಗಿದ್ದು, ಇದು ನಿಮಗೆ ನೇರವಾಗಿ ತಿನ್ನಲು ಕಹಿ ಎನಿಸಿದರೆ ಇದನ್ನು ಕಷಾಯ ಮಾಡಿಕೊಂಡು ಕುಡಿಯಬಹುದು. ಹೀಗೆ ಮಾಡುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗಿ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.
02.ಜಂತು ನಿವಾರಣೆಗೆ ನೆಲಬೇವು:ಹೊಟ್ಟೆಯಲ್ಲಿ ಜಂತು ಹುಳುಗಳಾದಾಗ ಅವುಗಳ ನಿಯಂತ್ರಣಕ್ಕೆ ಪ್ರತಿದಿನ ರಾತ್ರೆ ಮಲಗುವ ಮೊದಲು, ನೆಲಬೇವಿನ ಕಷಾಯ ಮಾಡಿ ಕುಡಿಯುವುದರಿಂದ ಜಂತು ಹುಳುಗಳು ಕಡಿಮೆಯಾಗುತ್ತವೆ.
03.ಚರ್ಮದ ಮೇಲಿನ ತುರಿಕೆ ಕಡಿಮೆಮಾಡಲು ನೆಲಬೇವು ಸಹಾಯಕವಾಗಿದೆ:ನೆಲಬೇವಿನ ಗಿಡವು ಎಂಟಿ ಮೈಕ್ರೋಬಿಯಲ್ ಗುಣಗಳನ್ನು ಹೊಂದಿದ್ದು, ತಾಜಾ ನೆಲಬೇವಿನ ಗಿಡವನ್ನು ನುಣುಪಾಗಿ ರುಬ್ಬಿ ಪೇಸ್ಟ್ ಮಾಡಿ, ಇದನ್ನು ಚರ್ಮದ ತುರಿಕೆ ಭಾಗಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮದ ಮೇಲಿನ ಕಜ್ಜಿ, ತುರಿಕೆಗಳು ಕಡಿಮೆಯಾಗುತ್ತವೆ.
04.ಬಾಯಿಯ ಹುಣ್ಣಿನ ಸಮಸ್ಯೆಗೆ ನೆಲಬೇವು ಸಹಕಾರಿ:ಬಾಯಿಯಲ್ಲಿ ಹುಣ್ಣಿನ ತೊಂದರೆ ಇದ್ದರೆ, ನೆಲಬೇವಿನ ಕಾಂಡವನ್ನು ಮಜ್ಜಿಗೆಯಲ್ಲಿ ನೆನಸಿಟ್ಟು, ಅದನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಬೇಕು. ಬಾಯಿ ಹುಣ್ಣಿನ ಸಮಸ್ಯೆ ಕಂಡು ಬಂದಲ್ಲಿ ಈ ಪುಡಿಯನ್ನು ತುಪ್ಪದಲ್ಲಿ ಹುರಿದು ಅನ್ನದೊಂದಿಗೆ ಸೇವಿಸಬಹುದು.
05.ಅರೆಗೆನ್ನೆ ಶೂಲ ಕಡಿಮೆಮಾಡಲು ನೆಲಬೇವು ಸಹಕಾರಿ:ಅರೆಗೆನ್ನೆ ಶೂಲ ಎಂದರೆ ತಲೆಯ ಅರ್ಧಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು. ನೆಲಬೇವಿನ ತೊಗಟೆಗೆ ಅಮೃತ ಬಳ್ಳಿ ಮತ್ತು ಬೇವಿನ ತೊಗಟೆ ಮತ್ತು ಅರಿಸಿನ ಬೆರೆಸಿ ಪುಡಿ ಮಾಡಿ, ಆ ಪುಡಿಯನ್ನು ನೀರಿಗೆ ಹಾಕಿ, ಕುದಿಸಿ ಕಷಾಯ ಮಾಡಿ, ದಿನಕ್ಕೆ ೨ ಬಾರಿ ಆ ಕಷಾಯವನ್ನು ಸೇವಿಸುವುದರಿಂದ ಅರೆಗೆನ್ನೆ ಶೂಲ ಕಡಿಮೆಯಾಗುತ್ತದೆ.
06.ನೆಲಬೇವು ವಿಷ ನಿವಾರಕವಾಗಿದೆ:ಸಣ್ಣ ಪುಟ್ಟ ಹಾವು ಕಡಿದರೆ, ನೆಲಬೇವಿನ ಕಷಾಯ ಮಾಡಿ ಕುಡಿಯಬೇಕು. ಅದು ವಿಷನಿವಾರಕವಾಗಿ ಕಾರ್ಯ ನಿರ್ವಹಿಸುತ್ತದೆ.
07.ನೆಲಬೇವು ಅಜೀರ್ಣವನ್ನು ಹೋಗಲಾಡಿಸುತ್ತದೆ:ಅಜೀರ್ಣದ ಸಮಸ್ಯೆ ಕಂಡುಬಂದಾಗ, ನೆಲಬೇವಿನ ಕಷಾಯವನ್ನು ಮಾಡಿ ಕುಡಿಯುವುದರಿಂದ ಜೀರ್ಣ ಕ್ರಿಯೆ ಸರಾಗವಾಗಿ ನಡೆಯುತ್ತದೆ.
08.ನೆಲಬೇವು ಗಾಯಗಳನ್ನು ಬೇಗ ಗುಣಪಡಿಸುತ್ತದೆ:ನೆಲಬೇವಿನ ಎಲೆಗಳನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಅದನ್ನು ತಣ್ಣಗೆ ಮಾಡಿಕೊಂಡು, ಅದರಿಂದ ಗಾಯಗಳನ್ನು ತೊಳೆಯುವುದರಿಂದ ಗಾಯಗಳು ಬೇಗನೆ ಗುಣಮುಖವಾಗುತ್ತವೆ.
09.ಬಾಣಂತಿಯರಲ್ಲಿ ಎದೆಹಾಲನ್ನು ಹೆಚ್ಚಿಸಲು ನೆಲಬೇವು ಸಹಾಯಕವಾಗಿದೆ:ಬಾಣಂತಿಯರಲ್ಲಿ ಎದೆಹಾಲು ಕಡಿಮೆ ಇದ್ದರೆ, ನೆಲಬೇವಿನ ಕಷಾಯಕ್ಕೆ ಜೇನು ತುಪ್ಪ ಸೇರಿಸಿ ಕುಡಿಯುವುದರಿಂದ ಕ್ರಮೇಣವಾಗಿ ಎದೆಹಾಲು ಉತ್ಪತ್ತಿಯಾಗುತ್ತದೆ.
10.ನೆಲಬೇವಿನಿಂದ ಬೇರು ಹುಳದ ನಿಯಂತ್ರಣ:ಮಲೆನಾಡುಗಳಲ್ಲಿ ಅಡಿಕೆ ತೋಟಗಳು ನಮಗೆ ಸಾಮಾನ್ಯವಾಗಿ ಕಂಡು ಬರುತ್ತವೆ. ಇಂತಹ ಅಡಿಕೆ ತೋಟಗಳಲ್ಲಿ ಕೆಲವೊಂದು ಬಾರಿ ಬೇರು ಹುಳದ ಸಮಸ್ಯೆ ಉಂಟಾಗುತ್ತದೆ. ಇದನ್ನು ಹೋಗಲಾಡಿಸಲು ತೋಟಗಳಲ್ಲಿ ನೆಲ ಬೇವನ್ನು ಹೆಚ್ಚು ಹೆಚ್ಚು ಬೆಳೆಸುವುದರಿಂದ ಬೇರು ಹುಳುಗಳನ್ನು ನಿಯಂತ್ರಿಸಬಹುದು.