ಅನಾನಸ್ ಬೆಳೆಯುವ ರೈತರು ಗಮನಿಸಬೇಕಾದ ಕೆಲವು ಅಂಶಗಳು..

ಕೊಡಗಿನಂತಹ ಪ್ರದೇಶದಲ್ಲಿ ಕಾಫಿ, ಕರಿಮೆಣಸು, ಏಲಕ್ಕಿಯನ್ನೇ ನಂಬಿಕೊಂಡು ಬೆಳೆಗಾರರು ಬಂದಿದ್ದಾರೆ. ಆದರೆ ಕೆಲವೊಮ್ಮೆ ಹವಾಮಾನದ ವೈಪರೀತ್ಯ, ಬೆಲೆ ಕುಸಿತ ಹೀಗೆ ವಿವಿಧ ಕಾರಣಗಳಿಂದ ಸಂಕಷ್ಟ ಅನುಭವಿಸಿದ ಉದಾಹರಣೆಗಳು ಸಾಕಷ್ಟಿವೆ. ಹೀಗಾಗಿ ಜಿಲ್ಲೆಯಲ್ಲಿ ಹಲವು ಬೆಳೆಗಾರರು ಪರ್ಯಾಯ ಬೆಳೆಯತ್ತ ಚಿತ್ತ ಹರಿಸಿದ್ದಾರೆ. ಬಾಳೆ, ಶುಂಠಿ ಜತೆಗೆ ಇದೀಗ ಅನಾನಸ್ ಅ‌ನ್ನು ಬೆಳೆಯುತ್ತಿರುವುದು ಕಂಡುಬರುತ್ತಿದೆ. ಅನಾಸನ್ ಬೆಳೆಯುವವರು ಗಮನಿಸಬೇಕಾದ ಕೆಲವು ಅಂಶಗಳು ಇಲ್ಲಿವೆ…

  • ಎಲ್ಲ ಕಾಲದಲ್ಲೂ ಬೇಡಿಕೆ ಇದ್ದೇ ಇರುತ್ತದೆ

ಅನಾನಸ್ ಬೆಳೆ ಕೊಡಗಿನವರಿಗೆ ಹೊಸತಲ್ಲ. ಸಾಮಾನ್ಯವಾಗಿ ಎಲ್ಲರ ತೋಟದಲ್ಲಿಯೂ ಇದಕ್ಕೆ ಸ್ಥಾನವಿದೆ. ತಮ್ಮ ಉಪಯೋಗಕ್ಕಾಗಿ ಮಾತ್ರ ಬೆಳೆಸುತ್ತಿದ್ದರಾದರೂ ಇದೀಗ ಕೆಲವರು ಆರ್ಥಿಕ ದೃಷ್ಟಿಯಿಂದ ಬೆಳೆಯುತ್ತಿರುವುದು ಕಂಡು ಬಂದಿದೆ.ಅನಾನಸ್ ಪಾನೀಯ, ವಿವಿಧ ತಿನಿಸುಗಳಲ್ಲಿ ಉಪಯೋಗವಾಗುವುದರಿಂದ ಇದಕ್ಕೆ ಬೇಡಿಕೆ ಇದ್ದೇ ಇದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ನಿರ್ದಿಷ್ಟವಾಗಿಲ್ಲವಾದರೂ, ಬೆಳೆಗಾರರಿಗೆ ತೊಂದರೆಯಾಗದು ಎಂಬುವುದು ಇದನ್ನು ಬೆಳೆದವರ ಅಭಿಪ್ರಾಯ. ಅನಾನಸ್ ಹಣ್ಣಿನಲ್ಲಿ ದೇಹಕ್ಕೆ ಬೇಕಾದ ಅನ್ನಾಂಗಗಳು, ಲವಣಗಳಿದ್ದು, ರೋಗ ನಿರೋಧಕ ಶಕ್ತಿ ಸಹ ಇದೆ. ಇದು ಉಷ್ಣವಲಯದ ಹಣ್ಣಾಗಿದ್ದು, ಜೇಡಿ ಮಣ್ಣು ಹಾಗೂ ಜೌಗು ಮಣ್ಣನ್ನು ಹೊರತುಪಡಿಸಿದರೆ, ಇತರೆ ಎಲ್ಲ ಮಣ್ಣಿನಲ್ಲಿಯೂ ಚೆನ್ನಾಗಿ ಬೆಳೆಯುತ್ತದೆ. ಸಮಶೀತೋಷ್ಣ ವಾತಾವರಣ ಅಥವಾ ಸಾಮಾನ್ಯವಾಗಿ 40 ರಿಂದ 60 ಸೆಂ. ಮೀ ಮಳೆ ಬೀಳುವ ಪ್ರದೇಶಗಳಲ್ಲಿ ಇದನ್ನು ಬೆಳೆಯಬಹುದಾಗಿದೆ.

  • ಅನಾನಸ್ ಕೃಷಿ ಮಾಡುವುದು ಹೇಗೆ?

ಅನಾನಸ್ ‌ನಲ್ಲಿ ಮುಖ್ಯವಾಗಿ ಕ್ಯೂ ಮತ್ತು ‘ಕ್ವೀನ್’ ಕ್ಯೂ ಜಾತಿಗೆ ಸೇರಿದ ಎರಡು ಪ್ರಮುಖವಾದವು. ಈ ಗಿಡಗಳಲ್ಲಿ ಮುಳ್ಳುಗಳಿರುವುದಿಲ್ಲ, ಅಲ್ಲದೆ ಹಣ್ಣುಗಳ ಗಾತ್ರ ಹಿರಿದಾಗಿರುತ್ತದೆ. ಸಾಮಾನ್ಯವಾಗಿ ಒಂದೂವರೆ ಕಿ.ಗ್ರಾಂ. ನಿಂದ ಮೂರು ಕಿ.ಗ್ರಾಂ ತನಕವೂ ತೂಗುತ್ತವೆ. ಕ್ವೀನ್ಸ್ ತಳಿಗಳು ರುಚಿಯಾಗಿದ್ದು, ಹಣ್ಣುಗಳ ಗಾತ್ರ ಚಿಕ್ಕದಾಗಿರುತ್ತವೆ. ಇದು ಅರ್ಧ ಕಿ.ಗ್ರಾಂ ನಿಂದ ಒಂದೂವರೆ ಕಿ.ಗ್ರಾಂ. ತನಕ ತೂಗುತ್ತದೆ.ಅನಾನಸ್ ಸಸ್ಯಾಭಿವೃದ್ಧಿಯನ್ನು ಅನಾನಸ್ ಗಿಡದಲ್ಲಿ ಹುಟ್ಟುವ ಕಂದುಗಳಿಂದ, ಹಣ್ಣಿನ ಕೆಳಭಾಗದಲ್ಲಿರುವ ಚಿಗುರು (ಸ್ಲಿಪ್ಸ್) ಹಣ್ಣಿನ ಮೇಲ್ಭಾಗದಲ್ಲಿರುವ ಚಿಗುರು (ಕ್ರೌನ್ಸ್) ಗಳಿಂದ ಮಾಡಬಹುದಾಗಿದೆ. ಕಂದುಗಳು ಮತ್ತು ಸ್ಲಿಪ್ಸ್ ‌ಗಳನ್ನು ನಾಟಿಗೆ ಉಪಯೋಗಿಸುವುದರಿಂದ ಗಿಡಗಳು ಹುಲುಸಾಗಿ ಬೆಳೆಯುವುದಲ್ಲದೆ ಬಹುಬೇಗ ಫಸಲನ್ನು ಸಹ ನೀಡುತ್ತವೆ.

  • ಅನಾನಸ್ ಬೆಳೆಯುವಾಗ ಗಮನಿಸಬೇಕಾದ ಅಂಶಗಳು

ತೋಟಗಾರಿಕಾ ಇಲಾಖೆಯ ಪ್ರಕಾರ, ಅನಾನಸ್ ಕೃಷಿ ಮಾಡುವುದಾದರೆ ಕೃಷಿ ಮಾಡಲು ಉದ್ದೇಶಿಸಿದ ಸ್ಥಳವನ್ನು ಚೆನ್ನಾಗಿ ಉಳುಮೆ ಮಾಡಿ ಇಲ್ಲಿರುವ ಕಳೆ, ಕಸ, ಮುಂತಾದವುಗಳನ್ನು ತೆಗೆದು ಸ್ವಚ್ಛಗೊಳಿಸಬೇಕು. ಆನಂತರ ಸುಮಾರು ಎರಡು ಅಡಿ ಅಂತರದಲ್ಲಿ ಮುಕ್ಕಾಲು ಅಡಿ ಆಳ, ಎರಡು ಅಡಿ ಅಗಲದ ಚರಂಡಿ ತೆಗೆದು ಅದನ್ನು ಕೊಟ್ಟಿಗೆ ಗೊಬ್ಬರ ಹಾಗೂ ರಂಜಕ ಯುಕ್ತ ಗೊಬ್ಬರವನ್ನು ಬೆರೆಸಿ ಮುಚ್ಚಿ ನಂತರ ಚರಂಡಿಯಲ್ಲಿ ಒಂದು ಅಡಿ ಅಂತರದಲ್ಲಿ ಎರಡು ಸಸಿಗಳನ್ನು ನೆಡಬೇಕಾಗುತ್ತದೆ. ಹೀಗೆ ನೆಡುವಾಗ ಸಸಿಯ ಸುಳಿಗೆ ಮಣ್ಣು ಬೀಳದಂತೆ ಎಚ್ಚರ ವಹಿಸುವುದು ಒಳ್ಳೆಯದು. ಸಸಿಯನ್ನು ನೆಟ್ಟ ನಂತರ ಮಳೆ ಬೀಳುತ್ತಿದ್ದರೆ ನೀರು ಹಾಯಿಸುವ ಅಗತ್ಯವಿರುವುದಿಲ್ಲವಾದರೂ ಮಳೆಯಿರದಿದ್ದ ಸಂದರ್ಭವಾದರೆ ನೀರು ಹಾಯಿಸುವುದು ಅತ್ಯಗತ್ಯ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group