ಜೂನ್ 19 ತಂದೆಯ ದಿನಾಚರಣೆ (Fathet’s Day);

ಮಕ್ಕಳು ಮತ್ತು ಅಪ್ಪನ ನಡುವಿನ ಬಾಂಧವ್ಯದ ಸಂಕೇತವಾಗಿ ಜೂನ್ ತಿಂಗಳ ಮೂರನೇ ಭಾನುವಾರದಂದು ತಂದೆಯ ದಿನವನ್ನು ಆಚರಿಸಲಾಗುತ್ತದೆ. ಇದಕ್ಕೆ ಇಂತಹುದೇ ದಿನ ಎಂದು ಫಿಕ್ಸ್ ಆಗಿಲ್ಲ. ಜೂನ್ ತಿಂಗಳ ಮೂರನೇ ಭಾನುವಾರ ಯಾವ ದಿನ ಬರುತ್ತದೆ ಆ ದಿನದಂದು ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಸ್ಪೇನ್ ಮತ್ತು ಪೋರ್ಚುಗಲ್ನಂತಹ ದೇಶಗಳು ಮಾರ್ಚ್ 19ರಂದು ಸೇಂಟ್ ಜೋಸೆಫ್ ದಿನದಂದು ತಂದೆಯ ದಿನಾಚರಣೆಯನ್ನು ಆಚರಿಸುತ್ತಾರೆ. ತೈವಾನ್ನಲ್ಲಿ ಆಗಸ್ಟ್ 8ರಂದು ಹಾಗೂ ಥೈಲಾಂಡ್ನಲ್ಲಿ ಡಿಸೆಂಬರ್ 5ರಂದು ಆಚರಿಸಲಾಗುತ್ತದೆ.
ಅಪ್ಪ ಅದೆಷ್ಟೋ ನೋವು-ಸಂಕಟಗಳನ್ನು ನುಂಗಿ ಮನೆಯವರ ಹಿತಕ್ಕಾಗಿ ದಿನವಿಡೀ ದುಡಿಯುತ್ತಾರೆ. ಹುಟ್ಟಿದಾಗಿನಿಂದ ಉಜ್ವಲ ಭವಿಷ್ಯ ಕಾಣುವವರೆಗೂ ಮಕ್ಕಳ ಕೈ ಹಿಡಿದು ನಡೆಸುವ ಪ್ರತ್ಯಕ್ಷ ದೇವರು ಅವರು. ಹಗಲಿರುಳು ದುಡಿದು- ತನ್ನ ಕಷ್ವ ಬದಿಗಿಟ್ಟು ಮಕ್ಕಳಿಗೆ ಪ್ರೀತಿಯನ್ನು ಮಾತ್ರ ಉಣಬಡಿಸುವವರು ಅಪ್ಪ. ಈ ಎರಡಕ್ಷರದ ಪದದಲ್ಲಿ ಅದೆಷ್ಟು ಗಾಂಭೀರ್ಯ, ದರ್ಪ, ಕೋಪ, ಮುನಿಸು ಜತೆಗೆ ಅಳೆಯಲಾಗದಷ್ಟು ಪ್ರೀತಿ ಇರುವುದಂತು ನಿಜ. ಅದಕ್ಕಾಗಿಯೇ ಅಪ್ಪ ಎಂದರೆ ಆಕಾಶ ಎನ್ನುತ್ತಾರೆ. ಅವರ ತ್ಯಾಗ, ಪ್ರೀತಿ ಆಕಾಶದಷ್ಟೇ ನಿಶ್ಕಲ್ಮಶ ಮತ್ತು ವಿಸ್ತಾರ. ದುಡಿದು ಮನೆಯ ಸಾಕುವ ಯಜಮಾನ. ತನ್ನ ದೇಹವನ್ನು ಕುಟುಂಬಕ್ಕಾಗಿ ಸವೆಯುತ್ತಾರೆ. ತನಗೆ ಚೆನ್ನಾಗಿರುವ ಬಟ್ಟೆ, ಶೂ ಇಲ್ಲದಿದ್ದರೂ ತನ್ನ ಮಗನನ್ನು ಉತ್ತಮ ಶಾಲೆಗೆ ಸೇರಿಸುತ್ತಾನೆ. ಉತ್ತಮ ಬಟ್ಟೆ, ಉತ್ತಮ ಆಹಾರ ಕೊಡಿಸುತ್ತಾನೆ. ಮಕ್ಕಳು ಕೇಳಿದ ಎಲ್ಲವನ್ನೂ ಕೊಡಿಸುವ ಸಕಾರ ಮೂರ್ತಿ ಅಪ್ಪ.
ಅಪ್ಪಂದಿರ ದಿನದ ಮಹತ್ವ:ಕುಟುಂಬದಲ್ಲಿ ತಂದೆಯ ಕೊಡುಗೆಯನ್ನು ಅರಿತುಕೊಳ್ಳುವ ಮತ್ತು ಗೌರವಿಸುವ ಉದ್ದೇಶದಿಂದ ತಂದೆಯ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಇದು ಪಿತೃತ್ವ, ಪಿತೃ ಬಂಧಗಳು ಮತ್ತು ಪುರುಷ ಪೋಷಕರು ತಮ್ಮ ಕುಟುಂಬ ಮತ್ತು ಅವರ ಮಕ್ಕಳ ಕಡೆಗೆ ಮಾಡಿದ ಪ್ರಯತ್ನಗಳನ್ನು ಸ್ಮರಿಸುವ ದಿನ.
ತಂದೆಯ ದಿನವನ್ನು ಹೇಗೆ ಆಚರಿಸಲಾಗುತ್ತದೆ: ತಂದೆಯ ದಿನವನ್ನು ಭಾರತದಲ್ಲಿ ಬಹಳ ಪ್ರೀತಿಯಿಂದ ಆಚರಿಸಲಾಗುತ್ತದೆ. ಆದಾಗ್ಯೂ, ಈ ದಿನ ಮಕ್ಕಳು ತಮ್ಮ ತಂದೆಯ ಪ್ರಯತ್ನಗಳನ್ನು ಮತ್ತು ಕುಟುಂಬಕ್ಕೆ ನೀಡಿದ ಕೊಡುಗೆಯನ್ನು ಅಂಗೀಕರಿಸುತ್ತಾರೆ. ತಮ್ಮ ತಂದೆಗೆ ವಿಶೇಷ ಭಾವನೆ ಮೂಡಿಸಲು ಅವರು ಉಡುಗೊರೆಗಳು, ಹೃದಯಸ್ಪರ್ಶಿ ಕಾರ್ಡ್‌ಗಳು, ವಿಹಾರ ಮತ್ತು ಭೋಜನ ಮಾಡುವ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಮಕ್ಕಳು ತಮ್ಮ ತಂದೆಯೊಂದಿಗೆ ಸಾಧ್ಯವಾದಷ್ಟು ಸಮಯವನ್ನು ಕಳೆಯಲು ಪ್ರಯತ್ನಿಸುತ್ತಾರೆ. ಈ ವರ್ಷ ಸಾಂಕ್ರಾಮಿಕ ರೋಗದಿಂದಾಗಿ ಅನೇಕ ನಿರ್ಬಂಧಗಳಿವೆ, ಹಾಗಾಗಿ ಆಚರಣೆಯನ್ನು ಮನೆಯಲ್ಲೇ ಸರಳವಾಗಿ ಮತ್ತು ಸುಂದರವಾಗಿ ಮಾಡುವುದು ಉತ್ತಮ.