ಮಳೆಗಾಲದಲ್ಲಿ ಆಹಾರ ಪದ್ಧತಿ ಹೀಗಿರಲಿ:

ಮಳೆಗಾಲದಲ್ಲಿ ಆಹಾರ ಪದ್ಧತಿ:ಮಳೆಗಾಲದಲ್ಲಿ ಆರೋಗ್ಯಕರ ಆಹಾರ ಪದ್ಧತಿ ಅತೀ ಮುಖ್ಯ. ಜೀರ್ಣ ಶಕ್ತಿಯನ್ನು. ಉದ್ದೀಪನಗೊಳಿಸಲು ಸಹಾಯಕವಾಗುವ ಲವಣ(ಉಪ್ಪು), ಆಮ್ಲ (ಹುಳಿ) ಮಧುರ (ಸಿಹಿ) ಹಾಗೂ ಕಟು (ಖಾರ)ರಸಗಳು ಪ್ರಧಾನವಾಗಿರುವ ಸ್ನೇಹ (ಜಿಡ್ಡು)ದಿಂದ ಕೂಡಿದ ಬೆಚ್ಚಗಿರುವ ಆಹಾರವನ್ನು ವಿಶೇಷವಾಗಿ ಸೇವಿಸಬೇಕು. ಆಹಾರವು ಲಘುವಾಗಿ ಅಂದರೆ ಸುಲಭವಾಗಿ ಜೀರ್ಣವಾಗುವಂಥದಾಗಿರಬೇಕು. ಹಳೆಯದಾದ ಅಕ್ಕಿ, ಗೋಧಿ, ಜೋಳ, ರಾಗಿ ಮತ್ತು ಇತರ ಧಾನ್ಯಗಳಿಂದ ತಯಾರಾದ ತುಪ್ಪ ಶುಂಠಿಗಳಿಂದ ಸಂಸ್ಕರಿಸಿದ ಬಿಸಿಯಾದ ಆಹಾರವನ್ನು ಉಪಯೋಗಿಸಬೇಕು. ಮೂಲಂಗಿ, ಹುರುಳಿಕಾಯಿ, ಕ್ಯಾರೆಟ್, ಗೋರಿಕಾಯಿ, ಹೀರೆಕಾಯಿ ಹಾಗೂ ಈ ಋತುಮಾನದಲ್ಲಿ ವಿಶೇಷವಾಗಿ, ಬೆಳೆಯುವ ಸೊಪ್ಪು ಮತ್ತು ಇತರ ಕಾಯಿಪಲ್ಯಗಳು ಉಪಯೋಗ ಒಳ್ಳೆಯದು. ಆಲೂಗಡ್ಡೆ, ಕಡಲೆಗಳು, ಬಟಾಣಿ, ಅವರೆ, ಉದ್ದು, ಮೊಟ್ಟೆ ಮುಂತಾದ ಜೀರ್ಣಕ್ಕೆ ಕಠಿಣವಾದ ಪದಾರ್ಥಗಳನ್ನು ವರ್ಜಿಸಬೇಕು. ಹುರುಳಿ, ತೊಗರಿಬೇಳೆ ಹೆಸರು ಇವುಗಳ ಬಳಕೆ ಹಿತಕರ. ಉಪ್ಪಿನಕಾಯಿ ಬಳಕೆ ಇತರೆ ಋತುಗಳಲ್ಲಿ ನಿಷಿದ್ಧ.ಸೇಬು, ಮೂಸಂಬಿ, ಅನನಾಸ್, ದಾಳಿಂಬೆ ಮುಂತಾದ ಮಧುರ, ಆಮ್ಲ, ಲವಣ ರಸಗಳುಳ್ಳ ಹಾಗೂ ಈ ಋತುವಿನಲ್ಲಿ ವಿಶೇಷವಾಗಿ ಸಿಗುವ ನೇರಳೆ, ಕವಳೆ, ಮಂಗಳ ಮುಂತಾದ ಹಣ್ಣುಗಳನ್ನು ವಿಶೇಷವಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಹಿತಕರ. ನದಿ, ಕೆರೆ, ಕೊಳಗಳಲ್ಲಿ ಹೊಸದಾಗಿ ಬಿದ್ದ ಮಳೆಯಿಂದ ನೀರು ಕಲುಷಿತವಾಗಿರುತ್ತದೆ. ಆದುದರಿಂದ ಈ ನೀರನ್ನು ಕುಡಿಯಬಾರದು. ಬಾವಿಯ ಅಥವಾ ಯಾವುದೇ ಕುಡಿಯುವ ನೀರನ್ನು ಚೆನ್ನಾಗಿ ಕುದಿಸಿ ಶೋಧಿಸಿ ಕುಡಿಯಬೇಕು.
ಬಾಧಿಸುವ ಬೀದಿ ತಿಂಡಿಗಳು :ಬೀದಿ ಬದಿಯ ತಿಂಡಿಗಳನ್ನು ಈ ಸಮಯದಲ್ಲಿ ಆದಷ್ಟು ತಿನ್ನದಿರುವುದು ಒಳ್ಳೆಯದು. ಆದರೆ ಮಳೆಗಾಲದಲ್ಲಿ ಇಂತಹ ತಿಂಡಿಗಳನ್ನು, ಕರಿದ ತಿಂಡಿಗಳನ್ನು ತಿನ್ನಬೇಕೆನಿಸುವುದು ಸಹಜ, ಆದರೆ ಈ ಬೀದಿ ಬದಿಯಲ್ಲಿರುವ ತಿಂಡಿಗಳಲ್ಲಿ ಬ್ಯಾಕ್ಟೀರಿಯಾಗಳು ಕೂರುವುದು ಹೆಚ್ಚು. ಡಯೇರಿಯಾ, ಕಾಲರ ಮುಂತಾದ ರೋಗಗಳು ಕಲ್ಮಶ ನೀರು ಕುಡಿಯುವುದರಿಂದ ಬರುತ್ತದೆ, ಬೀದಿ ಬದಿಯ ಗಾಡಿಗಳಲ್ಲಿ ಸ್ವಲ್ಪ ನೀರು ಇಟ್ಟು ಅದರಲ್ಲಿಯೇ ಪ್ಲೇಟ್ ತೊಳೆದು ಮಸಾಲಪುರಿ, ಪಾನಿಪುರಿ ಕೊಡುತ್ತಿರುತ್ತಾರೆ. ಇಂತಹ ತಿಂಡಿಗಳನ್ನು ತಿಂದರೆ ಕಾಯಿಲೆ ಬರುವ ಸಾಧ್ಯತೆ ಹೆಚ್ಚು.
ತರಕಾರಿ ತಿಂದರೆ ರೋಗಗಳಿಗೆ ತಕರಾರು :ಹಸಿರು ಸೊಪ್ಪು ಮತ್ತು ಅನೇಕ ಬಗೆಯ ತರಕಾರಿಗಳನ್ನು ಈ ಸಮಯದಲ್ಲಿ ಹೆಚ್ಚಾಗಿ ಸೇವಿಸಬೇಕು. ಈ ತರಕಾರಿಗಳನ್ನು ಕತ್ತರಿಸಿ ಬಿಸಿನೀರಿನಲ್ಲಿ ತೊಳೆದು ನಂತರ ಅಡುಗೆಗೆ ಬಳಸಿದರೆ ಒಳ್ಳೆಯದು. ಮತ್ತು ಮಳೆ ಬರವುದಿಲ್ಲವೆಂದು ಹೊರಗೆ ಹೋಗಿರುತ್ತೇವೆ, ಆಗ ಇದ್ದಕ್ಕಿದ್ದ ಹಾಗೇ ಮಳೆ ಬಂದರೆ ಪೂರ್ತಿ ಒದ್ದೆಯಾಗುತ್ತೇವೆ, ಈ ರೀತಿ ಒದ್ದೆಯಾದರೆ ತಲೆ ಒರೆಸಿ ಸುಮ್ಮನೆ ಕೂರುವ ಬದಲು ಮನೆಗೆ ಬಂದ ಕೂಡಲೇ ನೀರನ್ನು ಬಿಸಿ ಮಾಡಿ ಸ್ನಾನ ಮಾಡಬೇಕು. ಬಟ್ಟೆ ಒದ್ದೆಯಾಗಿದ್ದರೆ ಕೂಡಲೇ ಬದಲಾಯಿಸಬೇಕು.
ಮುನ್ನೆಚ್ಚರಿಕೆ :
ಮನೆಯ ಮುಂದೆ ಸ್ವಚ್ಛತೆ ಕಾಪಾಡಿಕೊಳ್ಳಿ.
* ಸಮತೋಲಿತ ಆಹಾರ ಸೇವಿಸಿ. ಬೇಕರಿ, ಎಣ್ಣೆ . ಪದಾರ್ಥ, ಜಂಕ್‍ಫೂಡ್‍ನಿಂದ ದೂರವಿರಿ.
* ಕುದಿಸಿ ಆರಿಸಿದ ನೀರನ್ನೇ ಕುಡಿಯಿರಿ.ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ.
* ಮಲಗುವಾಗ ಸೊಳ್ಳೆ ಪರದೆ ಅಥವಾ ಬತ್ತಿ ಬಳಸಿ. ದ್ರವರೂಪದ ಆಹಾರ ಹೆಚ್ಚು ಸೇವಿಸಿ.
* ಟೈಫಾಯಿಡ್, ಕಾಲಾರ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯಾಗಿ ಲಸಿಕೆ ಹಾಕಿಸಿ.ಮಳೆ, ಗಾಳಿಗೆ ಮೈಯೊಡ್ಡದಿರಿ. ದೇಹವನ್ನು ಬೆಚ್ಚನೆಯ ಉಡುಪಿನಿಂದ ರಕ್ಷಿಸಿಕೊಳ್ಳಿ.