ನಿಮ್ಮ ಮನೆಯ ಹಿತ್ತಲಲ್ಲೇ ಕಾಡನ್ನು ಬೆಳೆಯಿರಿ!

!.ನಿಮ್ಮ ಮನೆಯ ಹಿತ್ತಲಲ್ಲೆ ಕಾಡನ್ನು ಬೆಳೆಸಬಹುದು! ಮನೆಯ ಹಿತ್ತಲಲ್ಲಿ ಕೈದೋಟವನ್ನು ಬೆಳೆಸುವುದನ್ನು ಕೇಳಿರುತ್ತೀರಿ, ಇದೇನಿದು ‘ಕಾಡು’ ಎಂದು ನಿಮಗೆ ಬೆರಗಾಗಬಹುದು. ಹೌದು, ಕಾಡು ಎಂದಾಗ ನಮಗೆ ದೊಡ್ಡ ಜಾಗದಲ್ಲಿ ಬಹಳ ಮರಗಳಿದ್ದು, ಕಾಡುಮಿಕಗಳು ಓಡಾಡಿಕೊಂಡಿರುವುದು ತೋಚುತ್ತದೆ. ಆದರೆ ಕಾಡನ್ನು ಒಂದು ಸಣ್ಣ ಜಾಗದಲ್ಲಿಯೂ ಬೆಳೆಯಬಹುದು. ಮರಗಳನ್ನು ಮನುಷ್ಯ ಒಳನುಗ್ಗಲಾರದಷ್ಟು ಹತ್ತಿರತ್ತಿರದಲ್ಲಿ ದಟ್ಟವಾಗಿ ಬೆಳೆಸಿದಲ್ಲಿ ಅದೇ ನನ್ನ ಮಟ್ಟಿಗೆ ಕಾಡು . .ಮಿಯಾವಾಕಿ ಬಗೆಯಲ್ಲಿ ಕಾಡನ್ನು ಬೆಳೆಸುವುದು ಹೇಗೆ?ಜಪಾನಿನ ಹೆಸರಾಂತ ಗಿಡದರಿಗ (botanist) ಅಕಿರಾ ಮಿಯಾವಾಕಿ ಅವರು ಕಾಡಿನ ಮರು ಬೆಳವಣಿಗೆಗೆ(forest restoration) ಒಂದು ಬಗೆಯನ್ನು ರೂಪಿಸಿದ್ದಾರೆ. ಮರುಬೂಮಿಯೂ ಸೇರಿದಂತೆ ಜಗತ್ತಿನ ಬೇರೆ ಬೇರೆ ಜಾಗಗಳಲ್ಲಿ ಈ ಮಿಯಾವಾಕಿ ಬಗೆಯನ್ನು ಬಳಸಿ ಯಶಸ್ವಿಯಾಗಿ ಕಾಡನ್ನು ಬೆಳೆಸಲಾಗಿದೆ.ಮೊದಲಿಗೆ ಬೆಳೆಸುವ ಜಾಗದ ಗುಣ ಹಾಗು ಮಣ್ಣಿನ ಗುಣವನ್ನು ತಿಳಿಯಬೇಕು. ಮಣ್ಣನ್ನು ಮೊದಲಿಗೆ ಮುಟ್ಟಿ, ಮೂಸಿ ಕೆಲವೊಮ್ಮೆ ರುಚಿ ನೋಡಿ ಸಹ ಅದರ ಗುಣವನ್ನು ತಿಳಿಯಲಾಗುತ್ತದೆ. ಮಣ್ಣು ತೀರಾ ಅಂಟಂಟಾಗಿದ್ದರೆ ನೀರು ಇಂಗುವುದಿಲ್ಲ, ಹಾಗೆ ಮಣ್ಣು ತೀರಾ ಮರಳು-ಮರಳಾಗಿದ್ದರೆ ಮಣ್ಣು ನೀರನ್ನು ಹಿಡಿದಿಟ್ಟುಕೊಳ್ಳುವುದಿಲ್ಲ. ಹಾಗಾಗಿ ಮಣ್ಣನ್ನು ಮೊದಲು ಸರಿಯಾಗಿ ಹದ ಮಾಡಲಾಗುವುದು.

ಮಣ್ಣನ್ನು ಹದಮಾಡುವ ಬಗೆ:

ಮೊದಲಿಗೆ ಸುಮಾರು ಒಂದು ಮೀಟರಿನ ಆಳದಷ್ಟು ಮಣ್ಣೆತ್ತಬೇಕು.ಮಣ್ಣಿಗೆ ಬತ್ತದ ಹೊಟ್ಟು, ಕಬ್ಬಿನ ಜಲ್ಲೆ, ತೆಂಗಿನ ನಾರು ಹೀಗೆ ಅಲ್ಲೆ ಹತ್ತಿರದಲ್ಲಿ ಸಿಗುವ ಸಾವಯವ ವಸ್ತುಗಳನ್ನು ಮಣ್ಣಿನ ಗುಣಕ್ಕೆ ತಕ್ಕಂತೆ ಬೆರೆಸಬೇಕು. ಬತ್ತದ ಹೊಟ್ಟು ಮಣ್ಣಿನಲ್ಲಿ ಕಿರು ತೂತುಗಳನ್ನು ಹೆಚ್ಚಿಸುತ್ತದೆ, ಇದರಿಂದ ಮಣ್ಣಿನಲ್ಲಿ ನೀರಿಂಗಲು ಸುಳುವಾಗುತ್ತದೆ. ಹಾಗೆ ತೆಂಗಿನ ನಾರು ಮಣ್ಣಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಅಳವನ್ನು ಹೆಚ್ಚಿಸುತ್ತದೆ.ಇವೆಲ್ಲದರ ಜೊತೆಗೆ ಮಣ್ಣಿನೊಟ್ಟಿಗೆ ಸಾವಯವ ಗೊಬ್ಬರವನ್ನು ಸೇರಿಸಬೇಕು. ಹೀಗೆ ಹದಮಾಡಿದ ಮಣ್ಣು ಗಿಡಗಳ ಬೇರು ಆಳದವರೆಗೂ ಸುಲಭವಾಗಿ ನುಸುಳುವಷ್ಟು ಮೆತ್ತಗಾಗಿರುತ್ತದೆ.

ಗಿಡಗಳ ಆಯ್ಕೆ ಹಾಗೂ ನೆಡುವ ಬಗೆ:

ಆ ಜಾಗದ ಸ್ತಳೀಯ ತಳಿಗಳ(native species) ಮರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಅದಕ್ಕಾಗಿ ಒಂದು ಸರಳ ಮಾನದಂಡವನ್ನು ಬಳಸಲಾಗುತ್ತದೆ. ಯಾವುದು ಮನುಷ್ಯನ ಕೈವಾಡಕ್ಕೂ (interference) ಮೊದಲಿತ್ತೋ ಅದನ್ನು ಅಲ್ಲಿಯ ಸ್ತಳೀಯ ತಳಿ ಎಂದು ನಿರ‍್ದರಿಸಲಾಗುತ್ತದೆ. ಇದನ್ನು ತಿಳಿಯಲು ಕಾಡುಗಳ, ದೈವದ ಬನಗಳ(sacred grooves) ಬಗ್ಗೆ ಅರಿಯಲಾಗುತ್ತದೆ. ಕೆಲವೊಮ್ಮೆ ಆ ಜಾಗದ ಸಾಹಿತ್ಯ, ಜಾನಪದಗಳನ್ನು ತಿಳಿಯಬೇಕಾಗುತ್ತದೆ. ಇಶ್ಟಾಗಿಯೂ ಮಾಹಿತಿ ಸಿಗದಿದ್ದಲ್ಲಿ ಹತ್ತಿರದ ಮ್ಯೂಸಿಯಮ್ಮುಗಳ ಮೊರೆ ಹೋಗಬೇಕಾಗುತ್ತದೆ. ಸ್ತಳಿಯ ತಳಿಗಳು ಯಾವು-ಯಾವುದೆಂದು ಪಟ್ಟಿ ಮಾಡಿಕೊಂಡ ಮೇಲೆ ಯಾವ ರೀತಿಯ ಕಾಡನ್ನು ಬೆಳಸಬೇಕೆಂದಿದೆಯೋ ಅದಕ್ಕೆ ತಕ್ಕಂತೆ ಮರಗಳನ್ನು ಆಯ್ದುಕೊಳ್ಳಬೇಕು. ಎತ್ತುಗೆಗೆ ಹಣ್ಣಿನ ಮರಗಳ ಕಾಡು ಬೆಳೆಸಬೇಕು ಎಂದಿದ್ದರೆ, ಹೆಚ್ಚು ಹೆಚ್ಚು ಹಣ್ಣಿನ ಮರಗಳನ್ನು (ಸರಿಸುಮಾರು 50ರಷ್ಟು), ಹಕ್ಕಿ, ದುಂಬಿಗಳನ್ನು ಸೆಳೆಯುವಂತಹ ಕಾಡು ಬೇಕೆಂದಿದ್ದಲ್ಲಿ ಹೆಚ್ಚು ಹೆಚ್ಚು ಹೂವಿನ ಮರಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹಾಗೆಯೇ ಸಾಮಾನ್ಯ ಹಸಿರು ಕಾಡು ಬೇಕೆಂದಿದ್ದಲ್ಲಿ ಸದಾಹಸಿರಿರುವ ಕಾಡನ್ನು ಬೆಳೆಯಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group