ದೊಡ್ಡಪತ್ರೆ ಗಿಡದ ಔಷದೀಯ ಗುಣಗಳು..

ನಾವು ಹಿತ್ತಲಲ್ಲಿ ಸ್ವಲ್ಪ ಜಾಗ ಇದ್ದರೆ ಸಾಕು, ಕೆಲವೊಂದಿಷ್ಟು ಗಿಡಗಳನ್ನು ಬೆಳೆಯುತ್ತೇವೆ. ಹೂವಿನ ಗಿಡಗಳು, ಹಣ್ಣಿನ ಗಿಡಗಳು, ಕೆಲವರು ತರಕಾರಿ ಕೂಡ ಬೆಳೆಯುತ್ತಾರೆ. ಇದರೆ ಜೊತೆ ಕೆಲವೊಂದು ಔಷಧಿ ಗುಣವನ್ನು ಹೊಂದಿರುವ ಗಿಡಗಳನ್ನು ಬೆಳೆದರೆ ಕೂಡ ಉಪಯೋಗಕರವಾಗಿರುತ್ತದೆ ಎಂದು ನನ್ನ ಅಭಿಪ್ರಾಯ.
ನಮ್ಮದು ಮೂಲತಃ ಆಯುರ್ವೇದ ಪದ್ಧತಿಯ ದೇಶ. ಋುಷಿ ಮುನಿಗಳ ಹಾದಿಯಿಂದಾಗಿ ಎಲ್ಲರೂ ಅದನ್ನೇ ಅಳವಡಿಸಿಕೊಂಡಿದ್ದೆವು. ಆದರೆ, ಕಾಲ ಕಳೆದಂತೆ ಅಲೋಪತಿ ಹಾಸು ಹೊಕ್ಕಾಗಿದ್ದು, ಈ ಪದ್ಧತಿಯಿಂದ ಬಡವರ ಶೋಷಣೆ ನಡೆಯುತ್ತಿದೆ. ಹಾಗಾಗಿ ಮೊದಲಿನಂತೆ ಆಯುರ್ವೇದದತ್ತ ಸಾಗಬೇಕು, ಎಂದು ಸಲಹೆ.
ದೊಡ್ಡಪತ್ರೆ ಗಿಡ :ನಮ್ಮ ನಿಮ್ಮ ಮನೆಯ ಹಿತ್ತಲಲ್ಲೇ ಇರುವ ಈ ಆರ್ಯುವೇದ ಸಂಜೀವಿನಿ ಯಾವುದೆಂದರೆ “ದೊಡ್ಡಪತ್ರೆ” ಅಥವಾ ಆಡು ಭಾಷೆಯಲ್ಲಿ ಕರೆಯಾಲಾಗುವ “ಸಾಂಬ್ರಾಣಿ ಸೊಪ್ಪು”. ಹಿಂದೆ ಜ್ವರ, ಶೀತ ಸೇರಿದಂತೆ ಹಲವು ಕಾಯಿಲೆಗಳಿಗೆ ತಮ್ಮ ಹಿತ್ತಲಿನಲ್ಲಿದ್ದ ಗಿಡವನ್ನೇ ಮದ್ದಾಗಿ ಬಳಸಿಕೊಳ್ಳುತ್ತಿದ್ದರು. ತಮ್ಮ ಹಿತ್ತಲಿನಲ್ಲಿ ಹೂವಿನ ಗಿಡಗಳೊಂದಿಗೆ ಔಷಧೀಯ ಸಸ್ಯಗಳನ್ನು ಬೆಳೆಸಿಕೊಳ್ಳುತ್ತಿದ್ದರು. ಔಷಧೀಯ ಗಿಡಗಳಲ್ಲಿ ದೊಡ್ಡಪತ್ರೆ ಗಿಡಕ್ಕೆ ಮಹತ್ವದ ಸ್ಥಾನ ಇದೆ. ಇದನ್ನು ಸಂಬಾರ ಬಳ್ಳಿ ಅಂತಲೂ ಕರೆಯುತ್ತಾರೆ. ಒಂದು ಚಿಕ್ಕ ಬಳ್ಳಿ ತಂದು ನೆಟ್ಟರೆ ಸಾಕು. ತೇವ ಮಣ್ಣಿನಲ್ಲಿ ಸ್ವಲ್ಪ ಜಾಸ್ತಿ ಇರಬೇಕು, ಚೆನ್ನಾಗಿ ಬೆಳೆಯುತ್ತದೆ.
ಒಂದು ಹೂವಿನ ಕುಂಡದಲ್ಲಿ ನೆಟ್ಟರೂ ಸಾಕು. ಮಕ್ಕಳು ಇರುವ ಮನೆಯಲ್ಲಿ ಖಂಡಿತಾ ಸಂಬಾರ ಬಳ್ಳಿ ಇರಲೇಬೇಕು. ದೊಡ್ಡಪತ್ರೆ ಎಲೆ ದಪ್ಪ ಇರುತ್ತದೆ. ಆದರೆ ನೀರಿನ ಅಂಶ ಜಾಸ್ತಿ ಇರುತ್ತದೆ. ಶೀತ, ಜ್ವರ, ಕಫ, ಗಂಟಲು ಕಟ್ಟುವಿಕೆ ಎಲ್ಲದಕ್ಕೂ ರಾಮಬಾಣ.
ಮಕ್ಕಳಿಗೆ ಜ್ವರ ಬಂದಾಗ ದೊಡ್ಡಪತ್ರೆ ಎಲೆಯನ್ನು ಸ್ವಲ್ಪ ಬಾಡಿಸಿ ಹಣೆಯ ಮೇಲೆ ಇಟ್ಟರೆ ಜ್ವರ ಕಮ್ಮಿಯಾಗುತ್ತದೆ. ದೊಡ್ಡಪತ್ರೆ ಎಲೆಗಳನ್ನು ಜಜ್ಜಿ ರಸ ತೆಗೆದು ಜೇನು ತುಪ್ಪದೊಂದಿಗೆ ಸೇರಿಸಿ ಕುಡಿಯುದರಿಂದ ಕಫ, ಬೇಧಿ ಕಮ್ಮಿಯಾಗುತ್ತದೆ.
ದೊಡ್ಡಪತ್ರೆ ಎಲೆ ರಸ ಸೇವಿಸಿದರೆ ಹಳದಿ ರೋಗ ಕಮ್ಮಿಯಾಗುತ್ತದೆ. ಪದೆ ಪದೇ ಮಕ್ಕಳ್ಳಲ್ಲಿ ಕಫ, ಕೆಮ್ಮು ಇದ್ದರೆ ದೊಡ್ಡಪತ್ರೆ ಎಲೆ ಬಾಡಿಸಿ ರಸ ತೆಗೆದು,ಜೇನುತುಪ್ಪದೊಂದಿಗೆ ಕೊಡುತ್ತಾ ಬರಬೇಕು. ದೊಡ್ಡಪತ್ರೆ ಎಲೆಯನ್ನು ಉಪ್ಪು ಸೇರಿಸಿ ತಿಂದರೆ ಜೀರ್ಣಶಕ್ತಿ ಹೆಚ್ಚುತ್ತದೆ. ಹುಳುಕಡ್ಡಿ ಆದ ಭಾಗಕ್ಕೆ ದೊಡ್ಡಪತ್ರೆ ಎಲೆ ಹಚ್ಚುತ್ತಾ ಬಂದರೆ ಕಮ್ಮಿಯಾಗುತ್ತದೆ.
ದೊಡ್ಡಪತ್ರೆ ಎಲೆಗಳಿಂದ ಬರೀ ಔಷಧಿ ಅಲ್ಲ ,ರುಚಿಯಾದ ಅಡುಗೆಗಳನ್ನು ತಯಾರಿಸಬಹುದು. ದೊಡ್ಡಪತ್ರೆಯಿಂದ ತಂಬುಳಿ ಮಾಡಬಹುದು. ಮಲೆನಾಡುಭಾಗದಲ್ಲಿ ಈ ತಂಬುಳಿಯನ್ನು ಹೆಚ್ಚಾಗಿ ಮಾಡುತ್ತಾರೆ. ದೊಡ್ಡಪತ್ರೆ ಎಲೆಯಿಂದ ಬಜ್ಜಿ ಕೂಡ ಮಾಡಬಹುದು.