ನವಿರಾದ ನೇರಳೆ ಹಣ್ಣಿನಲ್ಲಿರುವ ನೂರೆಂಟು ಔಷಧೀಯ ಗುಣಗಳ ನೀವು ಬಲ್ಲಿರಾ?

ರಕ್ತದಲ್ಲಿನ ಹೀಮೋಗ್ಲೋಬಿನ್ ಪ್ರಮಾಣ ಹೆಚ್ಚಿಸುವುದು, ಶ್ರೀಮಂತವಾಗಿರುವ ವಿಟಮಿನ್ ‘ಸಿ’ ಮತ್ತು ಕಬ್ಬಿಣದ ಅಂಶಗಳು, ತ್ವಚೆ ಮತ್ತು ಕಣ್ಣುಗಳ ಆರೋಗ್ಯ ವೃದ್ಧಿ, ಹೃದಯದ ಆರೋಗ್ಯ ರಕ್ಷಣೆ, ಹಲ್ಲು ಮತ್ತು ವಸಡುಗಳಿಗೆ ಬಲ ತುಂಬುವಿಕೆ, ಸೋಂಕು, ನಂಜು ತಡೆ ಮತ್ತು ಮಧುಮೇಹ ನಿಯಂತ್ರಣ ಸೇರಿ ಹತ್ತು ಹಲವು ಆರೋಗ್ಯ ಪ್ರಯೋಜನಗಳನ್ನು ಕಡಮಾಡುವ ಏಕೈಕ ಹಣ್ಣು ಎಂದರೆ, ಅದು ನೇರಳೆ ಹಣ್ಣು.
ಹೌದು ಗೋಲಿ ಆಕಾರದ ಸಣ್ಣ ಹಣ್ಣು ತನ್ನೊಳಗೆ ಹತ್ತು ಹಲವು ಆರೋಗ್ಯ ಪೂರಕ ಅಂಶಗಳನ್ನು ಅಡಕವಾಗಿಸಿಕೊಂಡಿದೆ. ಪ್ರೋಟೀನ್, ವಿಟಮಿನ್, ಆ್ಯಂಟಿ ಆಕ್ಸಿಡೆಂಟ್‌ಗಳು, ಮ್ಯಾಂಗನೀಸ್, ಪೋಟ್ಯಾಶಿಯಂ, ಕ್ಯಾಲ್ಸಿಯಂ ಸೇರಿ ಅಪಾರ ಪೋಷಕಾಂಶಗಳನ್ನು ಹೊಂದಿರುವ ನೇರಳೆ, ರೋಗ ನಿರೋಧಕವಾಗಿಯೂ ಕೆಲಸ ಮಾಡುತ್ತದೆ. ಮಧುಮೇಹ, ಹೃದಯದ ಕಾಯಿಲೆ, ಸಂಧಿವಾತ, ಹೊಟ್ಟೆಯ ಕಾಯಿಲೆಗಳ ನಿಯಂತ್ರಣ ಮತ್ತು ನಿವಾರಣೆಗೆ ಇದು ರಾಮಬಾಣ ಎನ್ನುತ್ತದೆ ಆಯುರ್ವೇದ.
ನೇರಳೆ ಹಣ್ಣು ವಿವಿಧ ವಿಟಮಿನ್‌ಗಳು, ಖನಿಜಾಂಶಗಳು ಮತ್ತು ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. 100 ಗ್ರಾಂ. ನೇರಳೆ ಹಣ್ಣು ಕ್ಯಾಲರಿ (ಶೇ.6.2), ನಾರಿನಂಶ (ಶೇ.1.9), ಕಾಬೋಹೈಢ್ರೇಡ್ಸ್ (ಶೇ.14), ಖನಿಜಾಂಶ (ಶೇ.1.4), ಕಬ್ಬಿಣ (1.2 ಮಿ.ಗ್ರಾಂ.) ಕ್ಯಾಲ್ಸಿಯಂ (15 ಮಿ.ಗ್ರಾಂ.), ಮಿಟಮಿನ್ ‘ಸಿ’ (ಶೇ.18) ಮತ್ತು ಶೇ.83ರಷ್ಟು ನೀರಿನ ಅಂಶ ಹೊಂದಿರುತ್ತದೆ
ಸಕ್ಕರೆ ಮಟ್ಟ ನಿಯಂತ್ರಣ: ನೇರಳೆಯ ಬೀಜಗಳನ್ನು ಒಣಗಿಸಿ, ಪುಡಿ ಮಾಡಿ ಸಂಗ್ರಹಿಸುವ ಆರ್ಯುವೇದ ತಜ್ಞರು, ಅದನ್ನು ಹಲವು ಕಾಯಿಲೆಗಳಿಗೆ ಔಷಧವಾಗಿ ಬಳಸುತ್ತಾರೆ. ನೈಸರ್ಗಿಕವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುವ ಗುಣ ನೇರಳೆ ಬೀಜದಲ್ಲಿದೆ. ಬೀಜದಲ್ಲಿರುವ ಹೈಪೋಗ್ಲೈಸೆಮಿಕ್ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಗ್ಗಿಸುತ್ತದೆ. ಜೊತಗೆ ಜಾಂಬೊಲಿನ್ ಮತ್ತು ಜಾಂಬೊಸೈನ್ ಎನ್ನುವ ಅಂಶಗಳು, ದೇಹದಲ್ಲಿ ಇನ್ಸುಲಿನ್ ಮಟ್ಟ ಹೆಚ್ಚಿಸುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ನೆರವಾಗುತ್ತವೆ.
ರಕ್ತಹೀನತೆ ನಿವಾರಣೆ: ರುತುಚಕ್ರದ ವೇಳೆ ಮಹಿಳೆಯರಲ್ಲಿ ಉಂಟಾಗುವ ರಕ್ತಸ್ರಾವದಿಂದ ಆಗುವ ರಕ್ತದ ಹಾನಿಯನ್ನು ಸರಿದೂಗಿಸುವ ಶ್ರೇಷ್ಠ ಗುಣ ನೇರಳೆ ಹಣ್ಣಿನಲ್ಲಿದೆ. ರಕ್ತಹೀನತೆಯಿಂದ ಬಳಲುತ್ತಿರುವವರು ಸಾಧ್ಯವಾದರೆ ಪ್ರತಿ ದಿನವೂ ನೇರಳೆ ಹಣ್ಣು ಸೇವಿಸಬೇಕು. ಇದರಲ್ಲಿರುವ ಕಬ್ಬಿಣದ ಅಂಶವು ರಕ್ತವನ್ನು ಶುದ್ಧೀಕರಿಸುತ್ತದೆ. ಜೊತೆಗೆ ರಕ್ತ ಹೀನತೆಯಿಂದ ಮುಕ್ತಿ ನೀಡುತ್ತದೆ. ನೇರಳೆ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದ ಒತ್ತಡ ನಿವಾರಣೆಯಾಗುತ್ತದೆ.
ಅತಿಸಾರಕ್ಕೆ ಪರಿಹಾರ :ನೇರಳೆ ಹಣ್ಣು ಸೇವಿಸಿದರೆ ಅತಿಸಾರ ಕಾಯಿಲೆ ಕಡಿಮೆಯಾಗುತ್ತದೆ ಹಾಗೂ ನೇರಳೆ ಹಣ್ಣನ್ನು ತಿನ್ನುವುದರಿಂದ ಜೀರ್ಣ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುತ್ತವೆ. ಈ ಹಣ್ಣಿನ ಸೇವನೆಯಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಜೊತೆಗೆ ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಅಂಶವು ದೇಹವನ್ನು ನೈಸರ್ಗಿಕವಾಗಿ ಶುದ್ಧವಾಗಿಸುತ್ತದೆ. ಅಲ್ಲದೆ, ರೋಗ ನಿರೋಧಕ ವ್ಯವಸ್ಥೆ ಉತ್ತಮಗೊಳ್ಳುತ್ತದೆ. ಕ್ಯಾನ್ಸರ್ ವಿರೋಧಿ ಗುಣಗಳೂ ಇದರಲ್ಲಿವೆ.