ಎರೆಹುಳು ಗೊಬ್ಬರ ಘಟಕದಿಂದ ಹೇಗೆ ಲಾಭ

ಎರೆಹುಳುವಿನ ಮುಖ್ಯ ಚಟುವಟಿಕೆಯೆಂದರೆ ಭೂಮಿಯನ್ನು ರೈತನಂತೆ ಸದ್ದಿಲ್ಲದೆ ಉಳುಮೆ ಮಾಡುತ್ತದೆ.ಭೂಮಿಯನ್ನು ಸಾಮಾನ್ಯ ಉಳುಮೆ ಮಾಡುವುದರಿಂದ 30 ಸೆಂ.ಮೀ ವರೆಗೆ ಮಾಡಬಹುದು. ಆದರೆ ಎರೆಹುಳುಗಳು 3 ಮೀಟರ್ ವರೆಗೆ ಉಳುಮೆ ಮಾಡುತ್ತದೆ ಎಂದರೆ ನಂಬಲಿಕ್ಕಿಲ್ಲ. ಹೌದು, ಕೃಷಿ ತಜ್ಞರು ಮತ್ತು ಎರೆಹುಳು ಸಾಕಾಣಿಕೆ ಮಾಡಿದ ರೈತರು ತಮ್ಮ ಅನುಭವದಿಂದಲೇ ಈ ಮಾತನ್ನು ಹೇಳಿದ್ದಾರೆ.ಎರೆಹುಳುಗಳ ಸಾಕಾಣಿಕೆಯಿಂದ ಉತ್ತಮ ಗುಣಮಟ್ಟದ ಸಾವಯವ ಗೊಬ್ಬರ ಪಡೆಯುವುದರ ಜೊತೆಗೆ ಸಸ್ಯಜನ್ಯ, ಪ್ರಾಣಿಜನ್ಯ, ತ್ಯಾಜ್ಯಗಳಿಂದ ಉಂಟಾಗಬಹುದಾದ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು.

ಎರೆಹುಳು ಸಾವಯವ ವಸ್ತುಗಳಾದ ಕೃಷಿ ತ್ಯಾಜ್ಯ ವಸ್ತುಗಳನ್ನು ತಿಂದು ತನ್ನ ಜಠರದಲ್ಲಿ ವಿಭಜಿಸಿ, ವಿವಿಧ ಪೋಷಕಾಂಶಗಳನ್ನೊಳಗೊಂಡ ಹಿಕ್ಕೆಗಳನ್ನು ಹಾಕುತ್ತದೆ. ಎರೆಗೊಬ್ಬರವನ್ನು ಸುಮು ಎಕರೆಗೆ 1 ಟನ್ ನಂತೆ ಬಳಸಿ ಹೆಚ್ಚಿನ ಇಳುವರಿ ಪಡೆಯಬಹುದು.ಎರೆಹುಳುವಿನಿಂದ 100 ಕೆಜಿ ಎರೆ ಗೊಬ್ಬರ ತಯಾರಿಸಲು ಸುಮಾರು ಮೂರು ಸಾವಿರ ಹುಳುಗಳು ಬೇಕು. ಇದಕ್ಕೆ ಒಂದು ತಿಂಗಳ ಸಮಯ ಬೇಕಾಗುತ್ತದೆ. ಎರೆಹುಳು ಗೊಬ್ಬರ ತಯಾರಿಕಾ ಘಟಕವನ್ನು ತಂಪಾದ, ತೇವಾಂಶವುಳ್ಳ, ನೆರಳಿರುವ ಜಾಗದಲ್ಲಿ ನಿರ್ಮಿಸಬೇಕು. ಚಪ್ಪಡಿ ಕಲ್ಲು, ಇಟ್ಟಿಗೆ ಅಥವಾ ಸಿಮೆಂಟಿನಿಂದ ತೊಟ್ಟಿಯನ್ನು ನೆಲದ ಮೇಲೆ ನಿರ್ಮಿಸಬೇಕು. ಸೆಗಣಿ ಗೊಬ್ಬರ, ಕೃಷಿಯ (ಬೆಳೆ ಕಟಾವಿನ ನಂತರ ಉಳಿದ ಹುಲ್ಲು, ಹೊಟ್ಟು, ಹಸಿರು ಕಳೆ ಗಿಡಗಳು, ಕೆಟ್ಟ ತರಕಾರಿ, ಹಣ್ಣುಗಳು) ತ್ಯಾಜ್ಯಗಳನ್ನು ಚಿಕ್ಕದಾಗಿ ಕತ್ತರಿಸಿ 15-20 ದಿನಗಳವರೆಗೆ ಮುಚ್ಚಿಡಬೇಕು. ಹಾಗೆ ಇಟ್ಟ ಮಿಶ್ರಣ ಅರೆಬರೆ ಕೊಳೆತಿರುತ್ತದೆ. ಒಣಗಿದ ಎಲೆ ಮತ್ತು ಹುಲ್ಲಿನಿಂದ ಸುಮಾರು 15 ರಿಂದ 20 ಸೆಂ.ಮೀ ನಷ್ಟು ತೆಳು ಹಾಸನ್ನಾಗಿ (ಮೊದಲು ಪದರು) ಹಾಕಬೇಕು. ನಂತರ ಸೆಗಣಿ ಗೊಬ್ಬರ, ಕೃಷಿಯ ತ್ಯಾಜ್ಯಗಳ ಅರೆಬರೆ ಕೊಳೆತ ಮಿಶ್ರಣವನ್ನು ಸುಮಾರು 1.5 ನಿಂತ 2 ಕ್ವಿಂಟಾಲ್ ನಷ್ಟು ತುಂಬಿಸಬೇಕು. ಹಾಗೆ ತುಂಬಿದ ತೊಟ್ಟಿ ಮಡಯಿ ಮೇಲ್ಬಾಗದಲ್ಲಿ 1500 ರಿಂದ 2000 ಎರೆಹುಳು ಬಿಡಬೇಕು. ಎರೆಹುಳು ಬಿಟ್ಟನಂತರ ತಕ್ಷಣ ನೀರು ಚಿಮುಕಿಸಬೇಕು.

ಮತ್ತು ತೊಟ್ಟಿ ಅಥವಾ ಮಡಿಯಲ್ಲಿ ಸದಾ ಹಸಿಯಾಗಿರುವಂತೆ ನೀರು ಚಿಮುಕಿಸಬೇಕು. ಗೊಬ್ಬರವನ್ನು 30 ದಿನಗಳಿಗೊಮ್ಮೆ ತಿರುವಿ ಹಾಕಬೇಕು. ಹಾಗೆ ಮಾಡುವುದರಿಂದ ಗೊಬ್ಬರದಲ್ಲಿ ಗಾಳಿಯಾಡಲು ಅನುಕೂಲವಾಗುತ್ತದೆ. ಮತ್ತು ಮಿಶ್ರಣದ ಸಂಪೂರ್ಣ ಭಾಗ ಗೊಬ್ಬರವಾಗಿ ಪರಿವರ್ತನೆಯಾಗಲು ಎರೆಹುಳುವಿಗೆ ಅವಕಾಶವಾಗುತ್ತದೆ. ಸುಮಾರು 45-55 ದಿನಗಳಲ್ಲಿ ಎರೆ ಗೊಬ್ಬರ ತಯಾರಾಗುತ್ತದೆ. ಮಳೆ ಹಾಗೂ ಬಿಸಿಲಿನಿಂದ ಕಾಪಾಡಲು ತೊಟ್ಟಿಯ ಮೇಲೆ ಚಪ್ಪರ ಹಾಕಬೇಕು.ಎರೆಹುಳುಗಳು ಕಸವನ್ನು ತಿನ್ನುತ್ತಾ ಮೇಲ್ಪದರದಿಂದ ಒಳಹೋಗತೊಡಗುತ್ತವೆ. ಹಾಗೆ ಹೋಗುವಾಗ ಅವುಗಳ ಹಿಕ್ಕೆಯ ಮೇಲ್ಪದರದಲ್ಲಿ ಶೇಖರವಾಗುತ್ತದೆ

ಎರೆಗೊಬ್ಬರ ಲಾಭಾಧಯಕ ಹೇಗೆ?

12 ಮೀಟರ್ ಉದ್ದ, 2 ಮೀಟರ್ ಅಗಲ ಹಾಗೂ 0.6ಮೀಟರ್ ಎತ್ತರವಿರುವ ಒಂದು ತೊಟ್ಟಿಯಿಂದ 3 ತಿಂಗಳಲ್ಲಿ ಸುಮಾರು 50 ಕೆಜಿ ಇರುವ ಬ್ಯಾಗ್ ಗಳನ್ನು ಕನಿಷ್ಟ 30 ರಿಂದ 40 ಬ್ಯಾಗ್ ಗಳಷ್ಟು ಎರೆಗೊಬ್ಬರ ತಯಾರಿಸಬಹುದು. ಒಂದು 50ಕೆಜಿ ಬ್ಯಾಗಿನ ಬೆಲೆ 300 ರೂಪಾಯಿ ಅಂತೆ ಮಾರಾಟ ಮಾಡಲಾಗುವದು. ಒಂದು ತೊಟ್ಟಿಯಿಂದ ಕನಿಷ್ಟ 30 ಬ್ಯಾಗ್ ಉತ್ಪಾದನೆ ಮಾಡಿದರೆ 20 ತೊಟ್ಟಿಯಿಂದ ಒಂದು ಎಕರೆ ಜಾಗದಲ್ಲಿ 600 ಬ್ಯಾಗುಗಳನ್ನು ಉತ್ಪಾದನೆ ಮಾಡಬಹುದು, ಅಂದರೆ 3 ತಿಂಗಳಲ್ಲಿ 20 ತೊಟ್ಟಿಯಿಂದ 1,80,000 ಸಂಪಾದಿಸಬಹುದು ,ಹಾಗೆ ವರ್ಷದಲ್ಲಿ 4 ಸಲಾ ಉತ್ಪಾದನೆ ಮಾಡಿದರೆ ವರ್ಷಕ್ಕೆ ಎಲ್ಲ ಖರ್ಚು ತಗೆದು 4 ರಿಂದ 5 ಲಕ್ಷದವರೆಗೆ ಸಂಪಾದಿಸಬಹುದು ಎನ್ನುತ್ತಾರೆ ಕೃಷಿ ತಜ್ಞರು. ಎರೆಹುಳುಗೊಬ್ಬರ ಬೆಲೆ ಹೆಚ್ಚಾದರೆ ಆದಾಯವೂ ಹೆಚ್ಚಾಗುತ್ತದೆ.ಹೆಚ್ಚಿನ ಮಾಹಿತಿಗೆ ರೈತರು ಸರ್ಕಾರವೇ ಆರಂಭಿಸಿದ ಸಹಾಯವಾಣಿ ನಂಬರಿಗೆ ಸಂಪರ್ಕಿಸಬಹುದು. 1800 425 3553 ಗೆ ಉಚಿತ ಕರೆ ಮಾಡಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group