ಸಾವಯವ ಕೃಷಿಯಲ್ಲಿ ಅನುಸರಿಸಬೇಕಿರುವ ಐದು ಪ್ರಮುಖ ಅಂಶ:

01.ಬೆಳೆ ವೈವಿಧ್ಯತೆಇತ್ತೀಚೆಗೆ ಪಾಲಿಕಲ್ಚರ್ ಅಥವಾ ಬಹುಬೆಳೆ ಸಂಸ್ಕೃತಿ ಜನಪ್ರಿಯವಾಗಿದೆ. ರೈತರು ಮಿಶ್ರ ಬೆಳೆ ಪದ್ಧತಿ ಅನ್ನುತ್ತಾರಲ್ಲ, ಅದುವೇ ಈ ಪಾಲಿಕಲ್ಚರ್. ಇಲ್ಲಿ ಒಂದೇ ಭೂಮಿಯಲ್ಲಿ ಎರಡು ಅಥವಾ ಅದಕ್ಕಿಂತಲೂ ಹೆಚ್ಚು ಬೆಳೆಗಳನ್ನು ಬೆಳೆಯಲಾಗುತ್ತದೆ. ಈ ಬೆಳೆ ವೈವಿಧ್ಯತೆಯು ಪ್ರದೇಶದಿಂದ ಪ್ರದೇಶಕ್ಕೆ ಹಾಗೂ ರುತುವಿನಿಂದ ರುತುವಿಗೆ ಬದಲಾಗುತ್ತದೆ. ತಾತ ಮುತ್ತಾತಂದಿರು, ಅವರ ಅಪ್ಪ, ಅಜ್ಜಂದಿರು ಈ ಪದ್ಧತಿ ಅನುಸರಿಸುತ್ತಿದ್ದರಂತೆ. ಕಾಲಕ್ರಮೇಣ ನಾವದನ್ನು ಮರೆತಿದ್ದು, ಮೋನೊಕಲ್ಚರ್ ಅಂದರೆ ಏಕ ಬೆಳೆ ಪದ್ಧತಿಯ ದಾಸರಾಗಿದ್ದೇವೆ. ಬಹು ಬೆಳೆ ಪದ್ಧತಿ ಅಥವಾ ಮಿಶ್ರ ಬೆಳೆ ಪದ್ಧತಿಯು ಸಾವಯವ ಕೃಷಿಯ ಅತಿ ಮುಖ್ಯವಾದ ಭಾಗವಾಗಿದ್ದು, ಒಂದು ತುಂಡು ಭೂಮಿಯಲ್ಲಿ ಹಲವು ವಿಧದ ಬೆಳೆಗಳನ್ನು ಬೆಳೆಯುವುದು ಈ ಪದ್ಧತಿಯ ಮೂಲ ಗುಣಗಳಲ್ಲಿ ಒಂದಾಗಿದೆ.

02.ಮಣ್ಣಿನ ನಿರ್ವಹಣೆಸಕಲ ಜೀವರಾಶಿಗಳಿಗೂ ಮಣ್ಣೇ ಮೂಲ. ಮಣ್ಣಿಂದ ಕಾಯ ಎನ್ನುವಂತೆ ಕೃಷಿ ಕಾಯಕ ನಿಂತಿರುವುದು ಮಣ್ಣಿನ ಮೇಲೆಯೇ. ಹೀಗಾಗಿ ಮಣ್ಣನ್ನು ಜತನದಿಂದ ಕಾಪಾಡುವುದು ಕೃಷಿಕರ ಧರ್ಮ. ಸಾವಯವ ಕೃಷಿ ಪದ್ಧತಿಯಲ್ಲಿ ಮಣ್ಣಿನ ಗುಣಗಳು ಹಾಗೂ ಅದರ ಗುಣಮಟ್ಟದ ನೈಸರ್ಗಿಕ ನಿರ್ವಹಣೆಗೆ ಪ್ರಥಮ ಆದ್ಯತೆ ಇದೆ. ಇಲ್ಲಿ ಯಾವುದೇ ರಾಸಾಯನಿಕ ಬಳಸುವುದಿಲ್ಲ, ಬದಲಿಗೆ ಮಣ್ಣಿನಲ್ಲಿ ಜೀವಾಣುಗಳನ್ನು ಹೆಚ್ಚಿಸುವ ಕೊಟ್ಟಿಗೆ ಗೊಬ್ಬರ, ಜೈವಿಕ ಗೊಬ್ಬರ, ದ್ರಾವಣಗಳನ್ನು ಬಳಸುವುದರಿಂದ ಮಣ್ಣು ಸದಾ ಕಾಲ ಫಲವತ್ತಾಗಿರುತ್ತದೆ.

03.ಕಳೆಯೇ ಹಸಿರೆಲೆ ಗೊಬ್ಬರಕಳೆ ಗಿಡಗಳು ಯಾವ ಬೆಳೆಯನ್ನೂ ಕಾಡದೆ ಬಿಟ್ಟಿಲ್ಲ. ಕೃಷಿ ಪದ್ಧತಿ ಯಾವುದೇ ಇರಲಿ ಬೆಳೆಗಳ ನಡುವೆ ಸೇರಿಕೊಳ್ಳುವುದು ತನ್ನ ಹಕ್ಕು ಎಂಬಂತೆ ಕಳೆ ಗಿಡಗಳು ಹುಟ್ಟುತ್ತವೆ. ಆದರೆ ಬುದ್ಧಿವಂತ ಸಾವಯವ ಕೃಷಿಕರು ಈ ಕಳೆಯನ್ನೇ ಹಸಿರೆಲೆ ಗೊಬ್ಬರವನ್ನಾಗಿ ಪರಿವರ್ತಿಸುತ್ತಾರೆ. ಸಾವಯವ ಪದ್ಧತಿಯಲ್ಲಿ ಕಳೆ ಬೆಳೆಯದಂತೆ ಬೆಳೆಗಳ ನಡುವೆ ಹಸಿರೆಲೆ ಗೊಬ್ಬರವಾಗುವ ಜತ್ರೋಪ, ಡಯಾಂಚ, ವೆಲ್ವೆಟ್ ಬೀನ್ಸ್, ಅಲಸಂದಿ ಮತ್ತಿತರ ಬೆಳೆಗಳನ್ನು ಬೆಳೆಸಿ, ಅವು ಒಂದು ಹಂತಕ್ಕೆ ಬೆಳೆದ ನಂತರ ಅವುಗಳನ್ನು ಕತ್ತರಿಸಿ (ಮಲ್ಚಿಂಗ್ ಮಾಡಿ) ಹಸಿರೆಲೆ ಗೊಬ್ಬರವಾಗಿ ಪರಿವರ್ತಿಸಬೇಕು.

04.ಹಾನಿಕಾರಕ ಜೀವಿಗಳ ನಾಶಮಣ್ಣಿನಲ್ಲಿ ಕೃಷಿಗೆ ಪೂರಕವಾಗಿರುವ ಜೀವಿಗಳು ಇರುವಂತೆ, ಹಾನಿಕಾರಕ ಜೀವಿಗಳೂ ಇರುತ್ತವೆ. ಅವು ಸದ್ದಿಲ್ಲದಂತೆ ದಾಳಿ ಮಾಡಿ ಬೆಳೆ ನಾಶ ಮಾಡುತ್ತವೆ. ಆಧುನಿಕ ಕೃಷಿ ಪದ್ಧತಿಯಲ್ಲಾದರೆ ರಾಸಾಯನಿಕ ಸಿಂಪಡಿಸಿ ಇಂತಹ ಜಿವಿಗಳ ಕಾಟ ತಪ್ಪಿಸಬಹುದು. ಆದರೆ, ಸಾವಯವ ಕೃಷಿಯಲ್ಲಿ ಏನು ಮಾಡಬೇಕು ಎಂಬ ಪ್ರಶ್ನೆ ಮೂಡದೆ ಇರದು. ಸಾವಯವ ವಿಧಾನದ ಮೂಲಕವೂ ಈ ಹಾನಿಕಾರ ಜೀವಿಗಳನ್ನು ಹತೋಟಿ ಮಾಡಬಹುದು.

05.ಜಾನುವಾರುಗಳ ಬಳಕೆಜಾನುವಾರುಗಳು, ಅದರಲ್ಲೂ ದೇಸಿ ತಳಿ ಜಾನುವಾರುಗಳು ಸಾವಯವ ಕೃಷಿಯ ಅವಿಭಾಜ್ಯ ಅಂಗಗಳಾಗಿವೆ. ಸಾವಯವ ಕೃಷಿ ಪದ್ಧತಿ ನಿಂತಿರುವುದೇ ಈ ಜಾನುವಾರುಗಳ ಮೇಲೆ ಎಂದರೂ ತಪ್ಪಾಗಲಾರದು. ಕೊಟ್ಟಿಗೆ ಗೊಬ್ಬರ, ದೇಸಿ ಹಸುಗಳ ಸಗಣಿ, ಗೋಮೂತ್ರ, ಕುರಿ, ಕೋಳಿ ಗೊಬ್ಬರಗಳು ಸಾವಯವ ಕೃಷಿಯಲ್ಲಿ ಮಣ್ಣಿನ ಗುಣಮಟ್ಟ ಹೆಚ್ಚಿಸಿ, ಬೆಳೆಗಳಿಗೆ ಅಗತ್ಯ ಪೋಷಕಾಂಶಗಳನ್ನು ನೀಡುವ ಕೆಲಸ ಮಾಡುತ್ತವೆ. ಬೆಳೆ ಕಟಾವಾದ ನಂತರ, ಬಿತ್ತನೆಗೆ ಕೆಲ ದಿನ ಮುನ್ನ ಕೃಷಿ ಭೂಮಿಯಲ್ಲಿ ಕುರಿಗಳ ಹಿಂಡು ನಿಲ್ಲಿಸುವುದು ಕೂಡ ಸಾವಯವ ಕೃಷಿಗೆ ಪೂರಕವಾಗಿದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group