ಖರ್ಚಿಲ್ಲದೇ ರೋಗಗಳ ನಿಯಂತ್ರಣ ಯೋಗಾಸನಗಳಿಂದ ಸಾಧ್ಯ:

ಯಾವುದೇ ಖರ್ಚಿಲ್ಲದೇ ರೋಗಗಳನ್ನು ನಿಯಂತ್ರಣ ಮಾಡಿಕೊಳ್ಳುವುದು ಮತ್ತು ಕಡಿಮೆ ಮಾಡಿಕೊಳ್ಳುವುದು ಯೋಗಾಸನಗಳಿಂದ ಮಾತ್ರ ಸಾಧ್ಯವೆನ್ನಬಹುದು. ಏಕೆಂದರೆ ಈಗೀಗ ಚಿಕಿತ್ಸೆಗೆಂದು ಸಾವಿರಾರು ಖರ್ಚು ಮಾಡಬೇಕಾಗುತ್ತದೆ. ಜೊತೆಗೆ ನೋವಿನ ಚಿಕಿತ್ಸೆಯನ್ನು ಅನುಭವಿಸುವುದು ಕೂಡ ತಪ್ಪುವುದಿಲ್ಲ. ಹೀಗಾಗಿ ಯಾವುದೇ ಹಣ ಖರ್ಚು ಮಾಡದೇ ಬರೀ ದೇಹದ ಬೆವರಿಳಿಸುವ ಮೂಲಕ ನಾವು ನಮ್ಮಲ್ಲಿರುವ, ಬಂದಿರುವ ರೋಗಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಇನ್ನು ರೋಗ ಬಂದಿಲ್ಲವಾದರೂ ರೋಗ ಬರದಂತೆ ಮುಂಜಾಗ್ರತೆ ವಹಿಸಿಕೊಳ್ಳಬಹುದು. ಮೊದಲು ಯೋಗ ಮಾಡಬೇಕೆನ್ನುವವರು ಸೋಮಾರಿತನ, ಆಲಸ್ಯತನವನ್ನು ಬಿಡಬೇಕು. ಮನಸ್ಸು ಕೆಲವೊಮ್ಮೆ ದೇಹ ದಂಡಿಸಲು ಬಯಸುವುದಿಲ್ಲ.
ಆದರೆ ದೇಹದಂಡನೆಯಿಂದಲೇ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂದು ಮನಗಂಡು, ಮನಸ್ಸಿನ ಮಾತು ಕೇಳದೇ ಯೋಗಾಭ್ಯಾಸ ಶುರು ಮಾಡಬೇಕು. ಒಂದೆರಡು ದಿನ ಕಷ್ಟವೆನಿಸುತ್ತದೆ. ನಂತರ ಕ್ರಮೇಣ ತಾನಾಗಿಯೇ ರೂಢಿಯಾಗುತ್ತದೆ. ಉದಾಹರಣೆಗೆ ಚಿಕ್ಕಮಕ್ಕಳು ಮೊದ ಮೊದಲು ಶಾಲೆಗೆ ಹೋಗಲು ಹಿಂಜರಿಯುತ್ತಾರೆ. ನಂತರ ರೂಢಿಯಾಗಿ ಶಾಲೆ ತಪ್ಪಿಸಲು ಮನಸ್ಸು ಮಾಡಲ್ಲ. ಇದೇ ರೀತಿ ಯೋಗಾಭ್ಯಾಸವೂ ಕೂಡ ಒಂದು.ರೋಗಗಳ ಚಿಕಿತ್ಸೆಗೆ ವೈದ್ಯರು ನೀಡುವ ಔಷಧಿಗಳನ್ನು ನಾವು ಹೇಗೆ ತಪ್ಪಿಸದೇ ತೆಗೆದುಕೊಳ್ಳುತ್ತೇವೆಯೋ, ಅದೇ ರೀತಿ ಯೋಗಾಭ್ಯಾಸವನ್ನು ಚಿಕಿತ್ಸೆ ಎಂದೇ ತಿಳಿದುಕೊಂಡರೆ ಸಾಕು. ನಿರಂತರ ಯೋಗಾಭ್ಯಾಸ ಮಾಡುತ್ತ ಮನಸ್ಸು ಮತ್ತು ಹೃದಯ ಒಂದಾಗುತ್ತದೆ. ದೇಹದ ಮೇಲಿನ ಪ್ರೀತಿ ಹೆಚ್ಚಳವಾಗುತ್ತದೆ. ಸಾಮಾನ್ಯವಾಗಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಕಾಣುವ ಸಮಸ್ಯೆಯೆಂದರೆ ಮಧುಮೇಹ, ಬೊಜ್ಜು, ಮೊಣಕಾಲು ನೋವು, ಬೆನ್ನು ನೋವು ಮತ್ತು ಸುಸ್ತು. ಇವೆಲ್ಲವುಗಳಿಗೆ ಬೇರೆ ಬೇರೆ ಆಸನಗಳನ್ನು ಮಾಡಬೇಕಾಗುತ್ತದೆ. ಎಲ್ಲ ಯೋಗಾಸನಗಳನ್ನು ಕೂಡ ಮಾಡಬಹುದು.
ನಿರ್ದಿಷ್ಟ ಇಂತಹದೇ ಮಾಡಬೇಕೆಂದಿನಿಲ್ಲ. ಒಟ್ಟಿನಲ್ಲಿ ಎಲ್ಲ ಯೋಗಾಸನಗಳನ್ನು ಮಾಡುತ್ತಿದ್ದರೆ ತೊಂದರೆ ಏನಿಲ್ಲ. ಕೇವಲ ಪ್ರತಿನಿತ್ಯ ಒಂದು ಗಂಟೆ ಸಂಜೆಯಾಗಲಿ ಅಥವಾ ಮುಂಜಾನೆಯಾಗಲಿ ಯೋಗಾಭ್ಯಾಸ ಮಾಡಿದರೆ ಸಾಕು. ಎರಡೂ ಹೊತ್ತು ಮಾಡಿದರೆ ತಪ್ಪೇನಿಲ್ಲ.