ನಮ್ಮ ಸುತ್ತಲಿನ ಪರಿಸರವನ್ನು ನಾವು ಅರಿಯದಿದ್ದರೆ ಹೇಗೆ ?

ಪರಿಸರ ಅನ್ನುವ ಸರಳ ಶಬ್ದದ ಹಿಂದೆ ಒಂದು ಅಗಾಧವಾದ ಹಿನ್ನೆಲೆಯೇ ಇದೆ. ಬಹಳ ಸುಲಭವಾಗಿ ನಾವು ಪರಿಸರವನ್ನು ಕುರಿತು ಮಾತನಾಡಿ ಬಿಡುತ್ತೇವೆ; ಆದರೆ ಮಾತಿನಷ್ಟು ಹಗುರವಾದ ಶಬ್ದ ಇದಲ್ಲ. ಓರ್ವ ತಾಯಿಯಾದವಳು ಒಂಬತ್ತು ತಿಂಗಳು ತನ್ನ ಗರ್ಭದಲ್ಲಿ ಹೇಗೆ ಒಂದು ಭ್ರೂಣವನ್ನು ಇರಿಸಿ ಕೊಂಡು ನಂತರ ಎಲ್ಲ ವಿಧದಲ್ಲೂ ಪರಿಪೂರ್ಣವಾದ ಒಂದು ಮಗುವನ್ನು ಹೆರುತ್ತಾಳೋ ಹಾಗೆ ಪರಿಸರ ನಮ್ಮನ್ನೆಲ್ಲ ಕಾಪಾಡುತ್ತ ಬಂದಿದೆ.ನಮ್ಮ ನಡುವೆ ಸಾವಿರ ಸಾವಿರ ಸಂಖ್ಯೆಯ ಜೀವಿಗಳು, ಸಸ್ಯಗಳು, ಕ್ರಿಮಿ ಕೀಟಗಳು ಇವೆ. ಇವೆಲ್ಲವೂ ಈ ಸಸ್ಯ ಕ್ರಿಮಿ ಕೀಟಗಳ ಅಭಿವೃಧ್ದಿಗೆ, ಬೆಳವಣಿಗೆಗೆ ಪೂರಕವಾದ ವಾತಾವರಣದಲ್ಲಿಯೇ ಬೆಳೆಯುವುದನ್ನು ನಾವು ಗಮನಿಸಬಹುದು.
ಒಂದು ಕಾಡಿನಲ್ಲಿ ಹುಲಿಗಳಿವೆ ಅನ್ನುವುದಾದರೆ ಅದೇ ಕಾಡಿನಲ್ಲಿ ಹುಲಿಗಳಿಗೆ ಬೇಕಾದ ಜಿಂಕೆ, ಕಡಗಳನ್ನು ಪ್ರಕೃತಿ ನಿರ್ಮಾಣ ಮಾಡಿರುತ್ತದೆ. ಒಂದು ಸಮುದ್ರದಲ್ಲಿ ದೊಡ್ಡ ದೊಡ್ಡ ಮೀನುಗಳು ಇವೆ ಅನ್ನುವುದಾದರೆ ಈ ದೊಡ್ಡ ಮೀನುಗಳಿಗೆ ಆಹಾರ ಸಿಗಲೆಂದು ಪರಿಸರ ಸಣ್ಣ ಸಣ್ಣ ಮೀನುಗಳನ್ನು ಸೃಷ್ಟಿ ಮಾಡಿರುತ್ತದೆ. ಹಾಗೆಯೇ ಈ ಸಣ್ಣ ಮೀನುಗಳಿಗೆ ಬೇಕಾದ ಆಹಾರ ಕೂಡ ಅಲ್ಲಿಯೇ ದೊರೆಯುತ್ತದೆ.
ಕೆಲ ಹಕ್ಕಿಗಳು ಒಂದು ಮರದ ಹಣ್ಣುಗಳ ಮೇಲೆ ಅವಲಂಬಿಸಿ ಕೊಂಡಿರುತ್ತವೆ. ಈ ಮರಗಳಲ್ಲಿ ಹಣ್ಣು ದೊರೆತರೆ ಮಾತ್ರ ಆ ಹಕ್ಕಿಗಳ ಸಂಖ್ಯೆ ಅಧಿಕವಾಗುತ್ತದೆ. ಈ ಹಕ್ಕಿ ಹಾಗು ಆ ಮರ, ಇವೆರಡರ ನಡುವೆ ಒಂದು ಅವಿನಾಭಾವ ಸಂಬಂಧ ಏರ್ಪಟ್ಟಿರುತ್ತದೆ. ಇಲ್ಲವೆ ಪರಿಸರ ಇಂತಹ ಒಂದು ಸಂಬಂಧ ಏರ್ಪಡುವ ಹಾಗೆ ಮಾಡುತ್ತದೆ. ಈ ಹಕ್ಕಿಗಳಿಗೆ ಬೇಕಾದ ಮರಗಳು ಒಂದು ಪ್ರದೇಶದಲ್ಲಿ ಅಧಿಕವಾಗಿ ಬೆಳೆಯುವ ಹಾಗೆ ಆ ಹಕ್ಕಿಯೇ ಮಾಡುತ್ತದೆ. ಹಣ್ಣನ್ನು ತಿಂದ ಹಕ್ಕಿ ಅದರ ಬೀಜವನ್ನು ತನ್ನ ಮಲದ ಮೂಲಕ ಹಲವೆಡೆಗಳಲ್ಲಿ ಬಿತ್ತಿ ಪ್ರತಿಯಾಗಿ ಆ ಮರಗಳು ಅಲ್ಲಲ್ಲಿ ಹುಟ್ಟುವ ಹಾಗೆ ಮಾಡುತ್ತದೆ. ಪರಿಸರದ ಈ ವ್ಯವಸ್ಥೆಯ ಹಿಂದಿರುವ ಕಾಳಜಿಯನ್ನು ನಾವು ಗಮನಿಸಬೇಕು. ಮರಗಳ ಬೆಳವಣಿಗೆಗೆ ಹಕ್ಕಿ ಕಾರಣವಾಗುತ್ತದೆ, ಹಕ್ಕಿಗಳ ಬದುಕಿಗೆ ಮರಗಳು ನೆರವಾಗುತ್ತವೆ.