ಸಿರಿಧಾನ್ಯಗಳನ್ನು ಬೆಳೆಯುವುದರಿಂದ ಪರಿಸರ ಸಂರಕ್ಷಣೆ ಸಾಧ್ಯವಾಗುವುದು
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಬರಪ್ರದೇಶಗಳ ಸಂಖ್ಯೆಗಳು ಹೆಚ್ಚುತ್ತಿವೆ. ಅದೂ ಕೂಡ ಕೃಷಿ ಚಟುವಟಿಕೆಯೇ ಮುಖ್ಯವಾಗಿರುವ ಭಾಗದಲ್ಲಿ ನೀರಿನ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಕಡಿಮೆ ನೀರು ಬಳಕೆಯಿಂದ ಹೆಚ್ಚು ಇಳುವರಿ ಪಡೆಯುವ ಮತ್ತು ವಾತಾವರಣಕ್ಕೆ ಯಾವುದೇ ಹಾನಿಯಾಗದ ರೀತಿಯಲ್ಲಿ ಕೃಷಿ ಚಟುವಟಿಕೆ ಮಾಡುವ ಯೋಜನೆಗಳನ್ನು ಮಾಡಬೇಕಿದೆ. ಈ ಮೂಲಕ ಆಹಾರ ಉತ್ಪನ್ನಗಳನ್ನು ಬೇಡಿಕೆ ತಕ್ಕಂತೆ ಪೂರೈಸುವ ಕೆಲಸ ಮಾಡುವುದು ಇತ್ತೀಚಿನ ದಿನಗಳಲ್ಲಿ ಅನಿವಾರ್ಯ ಕೂಡ ಆಗಿದೆ. ಹೀಗಾಗಿ ಸಾವಯವ ಕೃಷಿ ಮತ್ತು ಸಿರಿಧಾನ್ಯಗಳನ್ನು ಬೆಳೆಯುವುದು ಉತ್ತಮ ಮಾರ್ಗವಾಗಿದೆ.
- ರಕ್ಷಣೆಗಾಗಿ ಸಿರಿಧಾನ್ಯ
ಇವತ್ತು ಸಾವಯವ ಕೃಷಿ ಮತ್ತು ಸಿರಿಧಾನ್ಯಗಳ ಕೃಷಿ ಯಾಕೆ ಅಗತ್ಯವಾಗಿದೆ ಅನ್ನುವುದು ಎಲ್ಲರಿಗೂ ಗೊತ್ತಾಗುತ್ತಿದೆ. ಪರಿಸರವನ್ನು ಸಂರಕ್ಷಿಸುವ ಹಾಗೂ ನೀರಿನ ಅಭಾವದ ನಡುವೆ ಉತ್ತಮ ಬೆಳೆ ಬೆಳೆಯುವ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕಿದೆ. ಸಿರಿಧಾನ್ಯಗಳನ್ನು ಬೆಳೆಯುವುದರಿಂದ ಕಡಿಮೆ ನೀರಿನ ಮೂಲಕ ಕೃಷಿ ಮಾಡಬಹುದಾಗಿದೆ. ಸಿರಿಧಾನ್ಯಗಳಿಗೆ ಭತ್ತ, ಗೋದಿ ಮತ್ತು ಕಬ್ಬಿನ ಬೆಳೆಗಳಿಗಿಂತ ಶೇಕಡಾ 80ರಷ್ಟು ಕಡಿಮೆ ನೀರು ಸಾಕಾಗುತ್ತದೆ. ಮಣ್ಣು ಸವೆತ ತಡೆಯೋದಿಕ್ಕೂ ಸಿರಿಧಾನ್ಯಗಳ ಕೃಷಿ ಸಾಕಷ್ಟು ನೆರವು ನೀಡಲಿದೆ.
ಸಿರಿಧಾನ್ಯಗಳನ್ನು ಬೆಳೆಯುವುದರಿಂದ ಮಣ್ಣಿನ ಫಲವತ್ತತೆಯನ್ನು ಉತ್ತಮಗೊಳಿಸಬಹುದು. ಸತತ ಕೃಷಿ ಚಟುವಟಿಕೆಗಳಿಂದ ಚಿಕ್ಕ ಬ್ರೇಕ್ ಕೂಡ ಭೂಮಿಗೆ ಸಿಗುತ್ತದೆ. ಮಣ್ಣಿನ ಸವೆತ ಹಾಗೂ ನೀರಿನ ಸಂರಕ್ಷಣೆ ಕೂಡ ಸಾವಯವ ಕೃಷಿಯಿಂದ ಸಾಧ್ಯವಿದೆ. ಅಷ್ಟೇ ಅಲ್ಲ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾವಯವ ಕೃಷಿ ನೆರವು ನೀಡುತ್ತದೆ. ”