ಗುಲಾಬಿ ಗಿಡ ಬೆಳೆಯುವ ವಿಧಾನ;

- ಗುಲಾಬಿ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ? ಸೌಂದರ್ಯದ ಪ್ರತೀಕವಂತಿರುವ ಈ ಹೂವಿಗೆ ಸಾಟಿಯಾದ ಹೂವೇ ಇಲ್ಲ ಎನ್ನುವ ಅಭಿಪ್ರಾಯ ನಮ್ಮಲ್ಲಿದೆ. ಗುಲಾಬಿಯಲ್ಲಿ ಅನೇಕ ತಳಿಗಳಿವೆ.
ದೊಡ್ಡ ಹೂವನ್ನು ಕೊಡುವ ಹೈಬ್ರಿಡ್ ಟಿ ಜಾತಿಯ ಗಿಡಗಳು ಮತ್ತು ಬಟನ್ ರೋಸ್ ಎಂದು ಕರೆಯಲ್ಪಡುವ ಮಿನಿಯೆಚರ್ ಜಾತಿಯ ಗಿಡಗಳು ಕೈತೂಟದಲ್ಲಿ ಬೆಳೆಸಲು ಸೂಕ್ತವಾಗಿವೆ.
- ಬೆಳೆಸುವ ವಿಧಾನ: ಗುಲಾಬಿಯನ್ನು ನೆಲದ ಮೇಲೆ ಅಥವಾ ದೊಡ್ಡ ಕುಂಡದಲ್ಲಿ ಬೆಳೆಸಬಹುದಾಗಿದೆ. ಗುಲಾಬಿ ಗಿಡ ಹೆಚ್ಚಾಗಿ ಬಿಸಿಲನ್ನು ಬಯಸುವುದರಿಂದ ಬಿಸಿಲು ಬೀಳುವ ಜಾಗದಲ್ಲಿ ಈ ಗಿಡವನ್ನು ಬೆಳೆಸಬೇಕು ಇಲ್ಲವಾದರೆ ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ.
- ಮಣ್ಣು, ಮರಳು ಮತ್ತು ಸಗಣಿ ಗೊಬ್ಬರವನ್ನು ಸಮಪ್ರಮಾಣದಲ್ಲಿ ಮಿಶ್ರ ಮಾಡಿದ ಮಿಶ್ರಣದಲ್ಲಿ ಗುಲಾಬಿ ಗಿಡವನ್ನು ನೆಡಬೇಕು. ಗುಲಾಬಿಗಿಡಕ್ಕೆ ರಂಜಕ, ಪೊಟ್ಯಶ್ ಮತ್ತು ಸಾರಜನಕದಿಂದ ಕೂಡಿದ ರಾಸಾಯನಿಕ ಮತ್ತು ಯಾವುದೇ ಸಾವಯವ ಗೊಬ್ಬರಗಳನ್ನು ಬಳಸಬಹುದಾಗಿದೆ.
- ಗುಲಾಬಿ ಗಿಡ ಚಿಗುರೊಡೆದಾಗ ಅದಕ್ಕೆ ಚಿಗುರು ಮತ್ತು ಮೊಗ್ಗನ್ನು ತಿನ್ನುವ ಅನೇಕ ಕೀಟಗಳ ಬಾಧೆ ಉಂಟಾಗುತ್ತದೆ. ಅದಕ್ಕೆ ಮೆಟಾಸಿಡ್ ಕೀಟನಾಶಕವನ್ನು ಸಿಂಪಡಿಸುವುದರಿಂದ ಈ ತೊಂದರೆಯನ್ನು ತಡೆಯಬಹುದು.
- ಗುಲಾಬಿಗೆ ಬರುವ ಇನ್ನೊಂದು ಕಾಯಿಲೆಯೆಂದರೆ ಬೂಷ್ಟು ರೋಗ. ಈ ರೋಗ ಬಂದ ಗಿಡದ ಎಲೆ ಮತ್ತು ಕಾಂಡಗಳು ಬಿಳಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಈ ರೋಗ ತೀವ್ರವಾದರೆ ಎಲೆಗಳೆಲ್ಲಾ ಉದುರಿ ಹೋಗಿ ಗಿಡ ಸತ್ತು ಹೂಗುತ್ತದೆ. ಇದಕ್ಕೆ ಬೆವಸ್ಟೀನ್ ಎಂಬ ಕೀಟನಾಶಕವನ್ನು ಸಿಂಪಡಿಸಿ ಈ ರೋಗವನ್ನು ತಡೆಗಟ್ಟಬಹುದು. ಹಾಗೆಯೇ ದುಡ್ಡು ಕಾಸು ಕೊಡದೆ ಒಲೆಯ ಬೂದಿಯನ್ನು ಬಳಸಬಹುದು.
- ನೀರಿನ ಕೊರತೆಯುಂಟಾದರೆ ಮತ್ತು ರೋಗದ ರಕ್ಷಣೆ ಮಾಡದಿದ್ದರೆ ಹಾಗೂ ಸಕಾಲದಲ್ಲಿ ಕಳೆ ತೆಗೆಯದಿದ್ದರೆ ಗಿಡಕ್ಕೆ ಹಾನಿಯುಂಟಾಗುತ್ತದೆ. ಹೀಗೆ ಗುಲಾಬಿ ಗಿಡ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದ್ದು ಉತ್ತಮ ರೀತಿಯಲ್ಲಿ ಬೆಳೆಸಿದರೆ ಇದು ಕೈತೋಟದ ಅಂದವನ್ನು ಹೆಚ್ಚಿಸುತ್ತದೆ