ಔಷಧಿಯಾಗಿ ಕಾಳು ಮೆಣಸು..!

ಔಷಧಿಯಾಗಿ ಮೆಣಸು :ಕೆಮ್ಮು ಮತ್ತು ಕಫ ರೋಗಗಳಲ್ಲಿ 100ರಿಂದ 250 ಮಿಗ್ರಾಂ. ಕಾಳು ಮೆಣಸಿನ ಚೂರ್ಣವನ್ನು ಅರ್ಧ ಚಮಚ ತುಪ್ಪ ಒಂದು ಚಮಚ ಜೇನುತುಪ್ಪ ಸೇರಿಸಿ ತಿಂದ, ಮೇಲೆ ಒಂದು ಲೋಟ ಬಿಸಿಯಾದ ಹಾಲಿಗೆ ಸ್ವಲ್ಪ ಅರಿಶಿನದ ಪುಡಿ ಮತ್ತು ಬೆಲ್ಲವನ್ನು ಸೇರಿಸಿ ತೆಗೆದುಕೊಂಡರೆ ಕಟ್ಟಿರುವ ಕಫವು ಕರಗಿ, ಕೆಮ್ಮು ಕಡಿಮೆಯಾಗುತ್ತದೆ. ಶೀತ ನೆಗಡಿಗಳು ದೂರವಾಗುತ್ತವೆ.
ನಿಶಾಂಧತೆ :ಕೆಲವರಿಗೆ ಹಗಲು ಹೊತ್ತಿನಲ್ಲಿ ಕಣ್ಣಿನ ದೃಷ್ಟಿ ಚೆನ್ನಾಗಿ ಇದ್ದು, ರಾತ್ರಿಯಾದ ಕೂಡಲೇ ಕಣ್ಣು ಕಾಣಿಸದಂತಾಗುತದೆ. ಇದಕ್ಕೆ ನಿಶಾಂಧತೆ ಅಥವಾ ರಾತ್ರಿ ಕುರುಡು ಎನ್ನುತ್ತಾರೆ. ಮೆಣಸಿನ ಕಾಳನ್ನು ಮೊಸರಿನ ತಿಳಿಯಲ್ಲಾಗಲಿ ಅಥವಾ ಎದೆಯ ಹಾಲಿನಲ್ಲಾಗಲಿ ತೇದು ಅಂಜನದಲ್ಲಿ ಕಣ್ಣಿಗೆ ಹಚ್ಚಿದರೆ ನಿಶಾಂಧತೆ ದೂರವಾಗುತ್ತದೆ. ಮೆಣಸು ಬಹಳ ತೀಕ್ಷ್ಣಗುಣ ಉಳ್ಳದ್ದಾಗಿರುವುದರಿಂದ, ಕಣ್ಣಿಗೆ ಹಚ್ಚಿದಾಗ, ಕಣ್ಣಿನಲ್ಲಿ ಅತಿಯಾದ ಉರಿಯುಂಟಾಗುತ್ತದೆ. ಆದುದರಿಂದ ಇದನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಅತಿ ಎಚ್ಚರಿಕೆಯಿಂದ ಹಚ್ಚಬೇಕು.
ಪೀನಸ ರೋಗದಲ್ಲಿ :ನೆಗಡಿ ಮತ್ತ ಶೀತ ಉಂಟಾಗಿ ಬಹಳ ದಿನಗಳವರೆಗೆ ವಾಸಿಯಾಗದಿದ್ದರೆ ಹಾಗೂ ಮೂಗಿನಿಂದ ಗಟ್ಟಿಯಾದ ಸಿಂಬಳ ಸೋರುವುದು, ಮೂಗು ಕಟ್ಟಿ ಉಸಿರಾಟಕ್ಕೆ ತೊಂದರೆ ಮತ್ತು ಕಣ್ಣಿನ ಉಬ್ಬಿನ ಜಾಗ್ರದಲ್ಲಿ ನೋವು, ಭಾರ ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಇದನ್ನು ದುಷ್ಟಪೀನಸ ಎಂದು ಕರೆಯುತ್ತಾರೆ. ಈ ರೋಗ ಹಳೆಯದಾದಾಗ ಮೂಗಿಗೆ ವಾಸನೆ ಸಹ ಗೊತ್ತಾಗುವುದಿಲ್ಲ. ಇಂತಹ ಸಮಯದಲ್ಲಿ ಕಾಲು ಮೆಣಸಿನ ಚೂರ್ಣವನ್ನು ಬೆಲ್ಲ ಮತ್ತು ಹಸುವಿನ ಮೊಸರಿನಲ್ಲಿ ಸೇವಿಸುವುದರಿಂದ ಉತ್ತಮ ಲಾಭ ಸಿಗುತ್ತದೆ.
ಕಫ ಮತ್ತು ಶೀತಜ್ವರದಲ್ಲಿ :ಅನೇಕರಿಗೆ ಮಳೆಯಲ್ಲಿ ನೆನೆಯುವುದರಿಂದ ಶೀತ, ನೆಗಡಿ, ಕೆಮ್ಮು, ತಲೆನೋವು, ಜ್ವರ ಉಂಟಾಗುತ್ತದೆ. ಆಗ ಮೆಣಸು, ಶುಂಠಿ, ಜೀರಿಗೆಗಳನ್ನು 1:2:3ರ ಪ್ರಮಾಣದಲ್ಲಿ ಸೇರಿಸಿ ಕಷಾಯವನ್ನು ತಯಾರಿಸಿ ಅದಕ್ಕೆ ಬೆಲ್ಲ ಸೇರಿಸಿ ತೆಗೆದುಕೊಂಡರೆ, ಕಫ ಮತ್ತು ಶೀತದಿಂದ ಉಂಟಾದ ಜ್ವರ ಕಡಿಮೆಯಾಗುತ್ತದೆ
ಮೆಣಸಿನ ಶುದ್ಧಿ :ಮೆಣಸು, ಉಷ್ಣ, ಮತ್ತು ಉಗ್ರಗಂಧ (ಘಾತು ವಾಸನೆ) ವುಳ್ಳದ್ದಾಗಿರುವುದರಿಂದ ಔಷಧಿಗಳಲ್ಲಿ ಉಪಯೋಗ ಮಾಡುವ ಮೊದಲು ಇದನ್ನು ಶುದ್ಧಿ ಮಾಡಿಕೊಳ್ಳುವುದು ಒಳ್ಳೆಯದು. ಕಾಳು ಮೆಣಸನ್ನು ಹುಳಿ ಮಜ್ಜಿಗೆಯಲ್ಲಿ ಮೂರು ದಿನ ನೆನಸಿ ಇಟ್ಟು ಅನಂತರ ತೆಗೆದು ಉಪಯೋಗಿಸಿದರೆ ಉತ್ತಮ ಗುಣ ದೊರಕುತ್ತದೆ,