ಜಲ ಜಾಗೃತಿ ಮೂಡದಿದ್ದರೆ ಅವನತಿ ತಪ್ಪಿದ್ದಲ್ಲ;

ಜಲಸಂಪನ್ಮೂಲವು ದೇಶದ ಪ್ರಗತಿಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಆದರೆ ಪ್ರಗತಿಯ ಹೆಸರಿನಲ್ಲಿ ನಾವು ಪ್ರಕೃತಿಯನ್ನು ನಾಶಮಾಡುತ್ತಿರುವುದರ ಪರಿಣಾಮವನ್ನು ಎದುರಿಸಬೇಕಾಗಿ ಬಂದಿದೆ. ಹಾಗಂತ ನಿರಾಶರಾಗದೆ, ಎಲ್ಲದಕ್ಕೂ ಸರ್ಕಾರದೆಡೆ ನೋಡದೆ, ಜನರೇ ಮುಂದಡಿಯಿಟ್ಟರೆ ಕೆಲಮಟ್ಟಿಗಾದರೂ ಪರಿಹಾರದ ಬೆಳಕು ಕಂಡೀತು
ಹಿಂದಿನ ಕಾಲದ ಮನೆಗಳಲ್ಲಿ ಮನೆಯ ಮುಂದೆ ಕೊಂಚ ಜಾಗ, ಅಲ್ಲೊಂದಿಷ್ಟು ಹೂವಿನ ಗಿಡಗಳು, ಹಿಂದೆ ಹಿತ್ತಿಲು, ಅಲ್ಲೊಂದು ಹಣ್ಣಿನ ಮರ ಸಾಮಾನ್ಯವಾಗಿ ಇರುತ್ತಿತ್ತು. ಪ್ರತಿ ಮನೆಯಲ್ಲೂ ತೆರೆದ ಬಾವಿಗಳಿರುತ್ತಿದ್ದವು. ಅವುಗಳಲ್ಲಿ ನೀರೂ ಇರುತ್ತಿತ್ತು. ಮಳೆಯ ನೀರು ನೆಲದಲ್ಲಿ ಇಂಗುತ್ತಿತ್ತು. ಮನೆಯ ಆವರಣದಲ್ಲಿ ಬಿದ್ದ ನೀರು ಹೊರಗೆ ಹರಿದು ಹೋಗುತ್ತಿರಲಿಲ್ಲ. ಅಲ್ಲಿಯ ನೆಲದಲ್ಲಿಯೇ ನಿಧಾನ ಒಳಸೇರುತ್ತಿತ್ತು. ಪ್ರಕೃತಿ ಮನುಷ್ಯನ ಬದುಕಿನ ಭಾಗವಾಗಿತ್ತು. ಜೀವನ ವಿಧಾನದಲ್ಲೇ ಶುದ್ಧಗಾಳಿ, ಶುದ್ಧನೀರು ಪಡೆಯುವ ಕ್ರಮವಿತ್ತು. ಬಾಡಿಗೆಗಿದ್ದ ಎಲ್ಲ ಮನೆಗಳಲ್ಲೂ ತೆರೆದ ಬಾವಿಗಳಿದ್ದವು. ಪಾರಿಜಾತ, ಸೀಬೆಹಣ್ಣಿನ ಮರಗಳಿದ್ದವು. ಅವೆಲ್ಲ ಸಿರಿವಂತ ಮನೆಗಳೇನಲ್ಲ. ಆದರೆ ಉಸಿರಾಡಲು ಅವಕಾಶವಿತ್ತು. ಅಂಗಳದಲ್ಲಿ ಬೆಳದಿಂಗಳಿನ ಊಟವಿತ್ತು. ಈಗ ಸ್ವಂತ ಮನೆಯಲ್ಲಿಯೆ ಇದ್ದರೂ. ಬಾವಿಯೂ ಇಲ್ಲ, ಮರಗಳಿರಲಿ, ಮನೆಯ ಆವರಣದಲ್ಲಿ ಮಣ್ಣೂ ಇಲ್ಲ. . ಕಾವೇರಿ ನೀರು ಸಾಲುತ್ತಿಲ್ಲ. ನೀರು ಕೊಳ್ಳುತ್ತಿದ್ದೇವೆ. ಎಂಥ ನೀರೋ? ಮುಂದೆ ಗಾಳಿಯನ್ನೂ ಕೊಳ್ಳುವ ಸ್ಥಿತಿ ಬರಬಹುದು. ಇನ್ನೂ ಮುಂದೆ ಗಾಳಿ ನೀರು ಕೊಳ್ಳಲಾದರೂ ಸಿಗುತ್ತದೆಯೋ? ನಾ ಕಾಣೆ. ಇದು ನಮ್ಮ ಪ್ರಗತಿ. ನೀತಿ- ‘ನಿಮ್ಮ ನಿಮ್ಮ ಮನೆಯ ಆವರಣದಲ್ಲಿ ಮಳೆನೀರು ಭೂಮಿ ಸೇರಲು ಇಂಗುಗುಂಡಿಗಳನ್ನಾದರೂ ಸ್ವಯಂಪ್ರೇರಣೆಯಿಂದ ನಿರ್ಮಿಸಿ’.