ಆರೋಗ್ಯಯುತ ಪರಿಸರವನ್ನು ಕಾಪಡಿಕೊಳ್ಳೋಣ;

ಪರಿಸರ ಸ್ವಚ್ಛತೆ ಶಾಲಾ ಕಾಲೇಜುಗಳಿಗೆ ಮಾತ್ರ ಸೀಮಿತವಾಗಿರದೆ ಪ್ರತಿ ನಾಗರಿಕನೂ ತನ್ನ ಸುತ್ತ ಪರಿಸರ ಸ್ವಚ್ಛತೆಗೆ ಸಂಕಲ್ಪ ಮಾಡಿದರೆ ಆರೋಗ್ಯ ಸಮಾಜ ಸಾಧ್ಯ
ಮನುಷ್ಯನ ಅತೀ ಆಸೆ, ಏರುತ್ತಿರುವ ಜನಸಂಖ್ಯೆ, ವೈಭವೋಪೇತ ಜೀವನದ ಬಯಕೆಗಳು ಪರಿಸರವನ್ನು ಹಾಳುಮಾಡುತ್ತಿವೆ. ನಮ್ಮ ಸುತ್ತಮುತ್ತಲಿನ ನೀರು, ಗಾಳಿ, ಭೂಮಿ, ಎಲ್ಲವೂ ಇಂದು ಅತೀ ಹೆಚ್ಚು ಕಲುಷಿತಗೊಳ್ಳುತ್ತಿವೆ. ಪರಿಸರ ಪ್ರೇಮಿಗಳು, ವಿದ್ಯಾವಂತರು, ಸರ್ಕಾರಗಳು ಕಾಲದಿಂದ ಕಾಲಕ್ಕೆ ಅನೇಕ ಕ್ರಮಗಳನ್ನು ಕೈಗೊಂಡು ಪರಿಸರವನ್ನು ಮಾಲಿನ್ಯದಿಂದ ರಕ್ಷಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ಹಾಗಿದ್ದರೂ ಮಲಿನವಾಗುತ್ತಿರುವ ಪರಿಸರ ಇಂದು ಕೇವಲ ಮನುಕುಲಕ್ಕಷ್ಟೇ ಅಲ್ಲದೆ ಇಡೀ ವಿಶ್ವದ ಜೀವಸಂಕುಲಕ್ಕೆ ಮಾರಕವಾಗುತ್ತಲೇ ಇದೆ. ಆರೋಗ್ಯಕರ ಜೀವನಕ್ಕೆ ಅತೀ ಅಗತ್ಯಗಳಾದ ಗಾಳಿ, ನೀರು, ಆಹಾರ ವಿಷಪೂರಿತವಾಗುತ್ತಿವೆ.
ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಇವುಗಳನ್ನು ತಡೆಗಟ್ಟಬೇಕಾದ್ದು, ನಮ್ಮ ಸುತ್ತಲಿನ ಪರಿಸರವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬೇಕಿರುವುದು ನಮ್ಮೆಲ್ಲರ ಕರ್ತವ್ಯ. ಸ್ವಚ್ಛತೆ ಅರಿವು ಮತ್ತು ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಮಾತ್ರ ಸಿಮಿತವಾಗಿರದೆ ಪ್ರತಿ ನಾಗರಿಕರಲ್ಲು ಎಲ್ಲಾ ಸಾರ್ವಜನಿಕ ಪ್ರದೇಶಗಳಲ್ಲಿ ಇದರ ಮಹತ್ವದ ಬಗ್ಗೆ ಅರಿವು ಮೂಡಿಸಿ ಕಾರ್ಯರೂಪಕ್ಕೆ ತಂದರೆ ಮಾತ್ರ ಆರೋಗ್ಯ ಸಮಾಜ ರೂಪಿಸಲು ಸಾಧ್ಯ. ಸ್ವಚ್ಛತೆ ಪ್ರತಿಯೊಬ್ಬರ ಬದುಕಿಗೆ ಅತ್ಯವಶ್ಯಕವಾಗಿದೆ.